Friday, December 31, 2010

ನಗಬೇಡಾ ಗೆಳತೀ ನಗಬೇಡಾ...


ನಗಬೇಡಾ ಗೆಳತಿ ನಗಬೇಡಾ
ಮೇಲೆ ಹುಸಿನಗೆ ಚೆಲ್ಲಿ
ಒಳಗೊಳಗೇ ಅಳುತಳುತಾ    II ನಗಬೇಡ II

ತಿಳಿನೀರಾ ತಳದಲ್ಲಿ ರಾಶಿ ರಾಡಿ ಕೆಸರು
ಭೂತಾಯಾ ಗರ್ಭದಲಿ ಬೆಂಕಿ ಬಿಸಿಯುಸಿರು
ಆ ಮುಗಿಲಾ ನಗೆಯಲ್ಲೂ ಬರಿ ಗುಡುಗು ಬರಸಿಡಿಲು
ವ್ಯಥೆ ವಿಷಾದಭರಿತ ಗೆಳತಿ ನಿನ್ನೊಡಲೂ  II ನಗಬೇಡ II

ಮರೆತುಬಿಡೂ ನಿನ್ನೆಗಳಾ
ಕಳೆದಾ ಅಮಾವಾಸ್ಯೆಗಳಾ
ನಿನ್ನಾ ಹೆಜ್ಜೆಗೆ ನಾನು ಹೆಜ್ಜೆಯಾಗೀ ಬರುವೆ
ಬಾಳ ಬೆಳಗುವ ಜ್ಯೋತಿಯಾಗಿ
ಕಣ್ಣಾ ತುಂಬಿದಾ ಕಾಂತಿಯಾಗಿ    II ನಗಬೇಡ II

(ಆನಂದ್ - 1994)

ನನ್ನಾಕೆಗೆ


ಹಸುಗೂಸ ಮೊಗದವಳೇ
ನಸುನಾಚಿ ನಿಂತವಳೇ
ಹಸನಾದ ನಗೆಯವಳೇ        II ಮುತ್ತ ಕೊಡಲೇII

ಸುಪ್ತಮನದಾಳದಲಿ
ಗುಪ್ತಗಾಮಿನಿಯಾಗಿ
ತಪ್ತಭಾವಗಳು ಕಡೆದಿರುವ ಮುತ್ತು       II ಮುತ್ತ ಕೊಡಲೇII


ಸ್ನೇಹದಾ ಚಿಪ್ಪಿನಲಿ
ಭಾವಗಳ ಸ್ವಾತಿಹನಿ
ನೆನಪುಗಳ ಕಾವಿನಲಿ ಕಟ್ಟಿರುವ ಮುತ್ತು      II ಮುತ್ತ ಕೊಡಲೇII


ಹೃದಯ ಸಾಗರ ತಳದಿ
ಹುದುಗಿರುವ ಮುತ್ತಗಳಾ
ಹೆಕ್ಕಿಕೊಳ್ಳಲು ಬಾರೆ ಅಂತರಂಗಕೆ ನೀರೇ      II ಮುತ್ತ ಕೊಡಲೇII

(ಆನಂದ್ - 1996)

ಗೀಜಗನ ಗೂಡಿನಲಿ...

ಚಿತ್ರ ಕೃಪೆ: www.madibirder.blogspot.com
ಗೀಜಗನ ಗೂಡಿನಲಿ
ಈ ಜಗದ  ಕಥೆಯಿಹುದು
ಸೋಜಿಗದ ವ್ಯಥೆಯಿಹುದು... ಬಂದು ನೋಡಾ II

ಅಂದು

ದಟ್ಟ ಹಸುರಿನ ನಡುವೆ
ಪುಟ್ಟಗೂಡುಗಳೆಡೆಗೆ
ಕೆಟ್ಟಮನುಜನ ದಿಟ್ಟಿ ಸೋಕದಂತೆ  II

ಎತ್ತ ನೋಡಲು ಕಾಡು
ಸುತ್ತ ಚೆಲ್ಲಿದ ಕಾಳು
ಹೆಕ್ಕಿ ತಿನ್ನಲು ಉಂಟು ಹುಳ ಹುಪ್ಪಟೆ  II

ಹೊರಗೆಲ್ಲ ಹಿಮಗಾಳಿ
ಮೈ ನಡುಗಿಸಿರಲು ಛಳಿ
ಬೆಚ್ಚನೆಯ ಗೂಡಲ್ಲಿ ಅಮ್ಮ ತಬ್ಬಿ  II

ಇಂದು

ಸುರಿಯಲಿಲ್ಲವೋ ಮಳೆಯು
ಒಣಗಿ ನಿಂತಿದೆ ಇಳೆಯು
ಉರಿಬಿಸಿಲು ಹೊರಗೆಲ್ಲಾ, ಗೂಡು ಬೆಂಕಿ  II

ಇಟ್ಟ ಮೊಟ್ಟೆಗಳೆಲ್ಲಾ
ಹುಟ್ಟಿರಲು ಅರೆ ಕಾವಿಗೆ
ಪುಟ್ಟ ಹಕ್ಕಿಗಳೆಲ್ಲಾ ಬಡಕಲಾಗಿ  II

ರೆಕ್ಕೆಯಲಿ ಬಲವಿಲ್ಲ
ಕೊಕ್ಕಿನಲಿ ಹುಳವಿಲ್ಲ
ಹೆಕ್ಕಿ ತಿನ್ನಲು ಸುತ್ತ ಕಾಳು ಒಂದಿಲ್ಲ  II

ಹಸಿರ ಸುಟ್ಟರು ಅವರು
ಉಸಿರ ಬಿಟ್ಟೆವು ನಾವು
ಹೆಸರಾದರೂ ಉಳಿದೀತೆ ಕಟ್ಟಕಡೆಗೆ II

(ಆನಂದ್ - 1999)