Friday, December 31, 2010

ಗೀಜಗನ ಗೂಡಿನಲಿ...

ಚಿತ್ರ ಕೃಪೆ: www.madibirder.blogspot.com
ಗೀಜಗನ ಗೂಡಿನಲಿ
ಈ ಜಗದ  ಕಥೆಯಿಹುದು
ಸೋಜಿಗದ ವ್ಯಥೆಯಿಹುದು... ಬಂದು ನೋಡಾ II

ಅಂದು

ದಟ್ಟ ಹಸುರಿನ ನಡುವೆ
ಪುಟ್ಟಗೂಡುಗಳೆಡೆಗೆ
ಕೆಟ್ಟಮನುಜನ ದಿಟ್ಟಿ ಸೋಕದಂತೆ  II

ಎತ್ತ ನೋಡಲು ಕಾಡು
ಸುತ್ತ ಚೆಲ್ಲಿದ ಕಾಳು
ಹೆಕ್ಕಿ ತಿನ್ನಲು ಉಂಟು ಹುಳ ಹುಪ್ಪಟೆ  II

ಹೊರಗೆಲ್ಲ ಹಿಮಗಾಳಿ
ಮೈ ನಡುಗಿಸಿರಲು ಛಳಿ
ಬೆಚ್ಚನೆಯ ಗೂಡಲ್ಲಿ ಅಮ್ಮ ತಬ್ಬಿ  II

ಇಂದು

ಸುರಿಯಲಿಲ್ಲವೋ ಮಳೆಯು
ಒಣಗಿ ನಿಂತಿದೆ ಇಳೆಯು
ಉರಿಬಿಸಿಲು ಹೊರಗೆಲ್ಲಾ, ಗೂಡು ಬೆಂಕಿ  II

ಇಟ್ಟ ಮೊಟ್ಟೆಗಳೆಲ್ಲಾ
ಹುಟ್ಟಿರಲು ಅರೆ ಕಾವಿಗೆ
ಪುಟ್ಟ ಹಕ್ಕಿಗಳೆಲ್ಲಾ ಬಡಕಲಾಗಿ  II

ರೆಕ್ಕೆಯಲಿ ಬಲವಿಲ್ಲ
ಕೊಕ್ಕಿನಲಿ ಹುಳವಿಲ್ಲ
ಹೆಕ್ಕಿ ತಿನ್ನಲು ಸುತ್ತ ಕಾಳು ಒಂದಿಲ್ಲ  II

ಹಸಿರ ಸುಟ್ಟರು ಅವರು
ಉಸಿರ ಬಿಟ್ಟೆವು ನಾವು
ಹೆಸರಾದರೂ ಉಳಿದೀತೆ ಕಟ್ಟಕಡೆಗೆ II

(ಆನಂದ್ - 1999)

No comments:

Post a Comment