Saturday, January 15, 2011

ಮನೆಗೆ ಮಾರಿಯಾಗದಿರಲಿ ಕನ್ನಡಿಗ!!


ಅಂದೊಮ್ಮೆ...
ಕಾರ್ಗಿಲ್‌ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...

ಹಿಂದೊಮ್ಮೆ ...
ಲಾಥೂರ್‌, ಕಿಲಾರಿಯಲ್ಲಿ,
ಕಛ್‌, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...

ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...

ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...

ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!

ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...

ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ

ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!

ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!


(ಆನಂದ್ - 2005)

Tuesday, January 11, 2011

ನನ್ನ ನಲ್ಲೆ..

ನನ್ನವಳು...
ಮುಗುಳ್ನಗೆಯ ಮಳೆಗೆರೆದು
ಮೌನದಾ ಸೆಲೆಯಲ್ಲೇ
ಮನ ಕದ್ದವಳು
ಹೃದಯ ಗೆದ್ದವಳು... II

ಕಣ್ಣೆದುರು ನನಸಾದ
ಪ್ರೇಮ ಪುತ್ಥಳಿಯಿವಳು...
ಕಣ್ಮುಚ್ಚೆ ಕನಸಾಗಿ
ಕಾಡುವವಳು...
ಲಾಲಿ ಹಾಡುವವಳು...II

ನಯನದಲೆ ಮನಮುಟ್ಟಿ
ಭಾವದಲೆಗಳ ತಟ್ಟಿ
ಬಾಳ ಬನದಲ್ಲಿ ನನ್ನ
ಜತೆಯಾದಳು...
ಮನಕೆ ಹಿತವಾದಳು...II

(ಆನಂದ್ - 1995)

ಏಳು ಹೆಜ್ಜೆ


ಗೆಳತಿ,
ನನ್ನೊಡನೆ ನೀನಿಡುವ ಏಳುಹೆಜ್ಜೆ
ಬಾಳ ಏಳು ಬೀಳುಗಳ ಆಸರೆ...
ಪ್ರೀತಿ ತುಂಬಿದ, ನೀತಿ ತುಂಬಿದ
ಪವಿತ್ರ ಬೆಸುಗೆಯೆಡೆಗಿನ ಏಳು ಹೆಜ್ಜೆ...II

ಬೇವುಬೆಲ್ಲಗಳ ನೋವುನಲಿವುಗಳ
ಸಮನಾಗಿ ಸವಿಯಾಗಿ ಮೆಲ್ಲೋಣ ಬಾ
ಪ್ರೇಮದಪ್ಪುಗೆಯಲ್ಲಿ ಬೆಚ್ಚಗಿನ ಮುತ್ತಲ್ಲಿ
ಕರಗೋಣ, ಕನಸುಗಳ ಹೆಣೆಯೋಣ ಬಾ...II

ಹೊಸತು ನಾಳೆಯು ನಮಗೆ..
ಬರಲಿ ಬೆಂಕಿ ಬಿರುಗಾಳಿಯ ಚಂಡಮಾರುತ
ಸಾಗೋಣ ಎದುರಾಗಿ... ಗೆಲುವಿನೆಡೆಗೆ
ಸೋತರೂ ಜತೆಯಾಗಿ ಸಾವಿನೆಡೆಗೆ... II

(ಆನಂದ್ - 1995)

ಒಲವಿನಾ ಆಸರೆ...

ನಲ್ಲೇ
ಜೀವನದ ನಂದನದಿ
ನೀ ಬಳುಕೋ ಬಳ್ಳಿಯಾದರೆ
ನಾನಾಗಿ ಮರ
ನೀಡುವೆ ಆಸರೆ!

ಬಾಳ ಚೆಲುವಿನ ಮೊಗದಿ
ನೀ ಕಣ್ಣಾಗಿರಲು ಮುಗುದೆ
ನಾನಾಗಿ ಕಾಯ್ವೆ
ಕಣ್ಣರೆಪ್ಪೆ!

ಮಿಡಿಯುಸಿರು ನೀನಾಗಿ
ತಂಗಾಳಿ ನಾನಾಗಿ
ನಿನ್ನ ಬಾಳಿನ ಉಸಿರು
ನಾನಾಗುವೆ!

ಕಣ್ಣ ನೋಟವ ಬೆರೆಸಿ
ಮನದ ನೋವನು ಮರೆಸಿ
ಪ್ರೇಮ ಸಾಮ್ರಾಜ್ಯದಿ ನಿನ್ನ
ನಾ ಮೆರೆಸುವೆ!

(ಆನಂದ್ - 1995)

ನಿನ್ನ ನಗೆಯ ಬೆಲೆ...

ನಲ್ಲೇ,
ನಿನ್ನ ಮುಗುಳುನಗೆಯ ಬೆಲೆ
ಹತ್ತು ಪೈಸೆಯಾದರೂ
ನಾ ಕೊಳ್ಳಲಾರೆ...

ಆದರೆ,
ಕೋಟಿ ರಕ್ತದ
ಹನಿಗಳಾದರೂ... ಸರಿಯೇ,

ನನ್ನ ಹೃದಯವನು ಬಸಿದು
ನರನಾಡಿಗಳ ಹಿಂಡಿ
ಧಾರೆಯೆರೆದು...
ಕೊಂಡುಕೊಳ್ಳುವೆ

(ಆನಂದ್ - 1988)

Monday, January 3, 2011

ನನ್ನೊಳಗಿನಾ ಹಾಡು
ನನ್ನೊಲವಿನಾ...
ನನ್ನೊಳಗಿನಾ...
ಕೋಗಿಲೆಗೆ ಈಗಲೇ
ಹಾಡುವಾಸೆ    II

ಈ ಹಾಡಿನಾ ಒಳಗೇ
ಶೃತಿಯಿಲ್ಲ... ಗತಿಯಿಲ್ಲ
ಸಿರಿಯ ಸೊಬಗಿಲ್ಲಾ...
ಮೆರುಗಿನಾ ಪದವಿಲ್ಲಾ...    II

ರಾಗಗಳ ಇಂಪಿಲ್ಲಾ...
ಭಾವಗಳ ಸೊಂಪಿಲ್ಲಾ...
ತಂಗಾಳಿ ತಂಪಿಲ್ಲಾ
ಈ ಹಾಡಲೀ...    II


ನನ್ನೊಲವಿನಾ...
ನನ್ನೊಳಗಿನಾ...
ಕೋಗಿಲೆಗೆ ಈಗಲೇ 
ಹಾಡುವಾಸೆ    II

(ಆನಂದ್ - 1994)

Saturday, January 1, 2011

ಓ ಪ್ರಿಯೆ... ಪ್ರಾಣಪ್ರಿಯೆ...


ನಿನ್ನಯ ಪ್ರೇಮದಿ ತೇಲಿದೆನಂದು
ಚಂದದ ಓ ಗೆಳತೀ
ಮತ್ತದೇ ನೆನಪಲಿ ಬಾಳಿಹೆನಿಂದು
ಕೇಳೇ ಓ ಗೆಳತಿ         II ಓ ಪ್ರಿಯೇ... ಪ್ರಾಣಪ್ರಿಯೆ II

ಕಾರಣವಿಲ್ಲದೇ
ದೂಡಿದೆ ದೂರಕೇ
ನನ್ನನು... ಏತಕೇ ಅಂದು
ನನ್ನೆದೆ ಕೋಗಿಲೆ
ನರಳಿತು ಅಂದು
ವಿರಹದ ನೋವಲೀ ಬೆಂದು     II ಓ ಪ್ರಿಯೇ... ಪ್ರಾಣಪ್ರಿಯೆ II

ಹೃದಯದ ಬಾಗಿಲು
ತೆರೆದಿದೆ ನಿನಗೇ
ಬಾರೆಯಾ ಮರಳಿ ಬಳಿಗೆ
ಬಾಳಿನ ಕತ್ತಲಾ
ನೀಗುವ ಹಣತೆ
ಆಗುವೆಯಾ ನೀ ಗೆಳತಿ         II ಓ ಪ್ರಿಯೇ... ಪ್ರಾಣಪ್ರಿಯೆ II

(ಆನಂದ್ - 1994)