Tuesday, March 13, 2012

ಹೃದಯ ಶಿವ


                  
              (1)
ವಿಘ್ನ ವಿನಾಶಕ ಗಣಪನ ಸ್ತುತಿಸಿ
ತಾಯಿತಂದೆ ಗುರುಹಿರಿಯರ ನಮಿಸಿ
ಹೇಳುವೆವಿಂದೂ ಕತೆಯಾ
ಹೇಳುವೆವೊಂದೂ ಕತೆಯಾ
                       
(2)
ಕತೆಯೊಳಗಿಲ್ಲಾ ಮಾಯಾಮಂತ್ರ
ಕಾಣಿರಿ ಯಾವಾ ಮೋಜೂ ತಂತ್ರ
ಮನವಿಟ್ಟು ನೋಡಿ ನೀತಿಯ ಕಲಿತರೆ
ಎಲ್ಲರ ಬಾಳೂ ಬೆಳಗುವುದು       

                        (3)
ಲೋಕವ ಕಾಯುವ ಎಲ್ಲರ ದೇವನು
ಮೂರುಕಣ್ಣಿನವ ನಮ್ಮಯ ಶಿವನು
ಎಲ್ಲಾ ಜನಗಳನು ಗಮನಿಸುತಿಹನು
ಅವನೇ ಸಾಕ್ಷಿ ಈ ಕತೆಗೆ

                        (4)
ಅಲ್ಲೊಂದಿತ್ತು ಪುಟ್ಟನೆ ಊರು
ಹೆಸರಲ್ಲೇನಿದೆ ಅದು ನಮ್ಮೂರು
ತಂದೆ ಇಲ್ಲದ ತಬ್ಬಲಿ ರಾಮು
ಬೆಳೆದಿಹ ತಾಯಿಯ ಮಡಿಲಿನಲಿ

                   (5)
ಮುರುಕು ಗುಡಿಸಿಲಾ ಸಾಲಿನಲಿ
ಹರುಕು ಹುಲ್ಲಿನಾ ಗುಡಿಸಿಲಲಿ
ಬಿರುಕು ನೆಲದ ಆ ಮನೆಯಲ್ಲಿ
ಬೆಳೆದಿಹ ತಾಯಿಯ ಮಡಿಲಿನಲಿ
                  
                        (6)
ಊಟಕೆ ಬಡತನ, ಬಟ್ಟೆಗೆ ಬಡತನ
ಪ್ರೀತಿಗೆ ಎಂದೂ ತಾರದು ಕೊರತೆ
ತಾಯಿಯ ಪ್ರೇಮ ಹಾಡಿದೆ ಹೃದಯಾ
ಲೋಕವು ಎಂದಿಗೂ ಮರೆಯದ ಚರಿತೆ

                   (7)
ಭಟ್ಟರ ಮನೆಯಲಿ ಬತ್ತ ಕುಟ್ಟಿಹಳು
ಶೆಟ್ಟರ ಮನೆಯಲಿ ರಾಗಿ ಬೀಸಿಹಳು
ತುತ್ತು ಅನ್ನಕಾಗಿ ದೇಹವ ತೆಯ್ದು
ಅಮ್ಮನು ಉಸಿರಾ ಬಸಿದಿಹಳು

(8)
ತಾಯಿಯ ಕಷ್ಟವ ಅರಿಯನು ರಾಮು
ಪ್ರೀತಿಯ ಬೆಲೆಯನು ಅರಿಯನು ರಾಮು
ಬೇಡಿದ ವಸ್ತುವು ದೊರಕದೆ ಹೋದರೆ
ಸಿಟ್ಟಿಗೆ ಏಳುವ ಪುಟಾಣಿ ರಾಮು

                   (9)
ಊಟಕೆ ಒಮ್ಮೆ ಉಪ್ಪು ಸಾಲದಿರೆ
ತಟ್ಟೆಯನೆತ್ತಿ ತೂರಿಹನು
ಅಮ್ಮನ ಶ್ರಮವದು ನೀರಲಿ ಹೋಮ
ತಾಯ ಪ್ರೇಮವನು ಗಮನಿಸನು

                   (10)
ಶೆಟ್ಟರ ಸಾಲ ತೀರಿಸಲೆಂದೂ
ತಾಯಿ ಉಳಿಸಿರುವ ಪುಟಾಣಿ ಗಂಟು
ಹೊಸಬಟ್ಟೆಯ ಹಟಕೆ ಬಿದ್ದ ರಾಮನ
ಕಣ್ಣುಬಿದ್ದಾಗ ಕರಗೇ ಹೋಯ್ತು                        (11)
ಮನೆಯಲಿ ರಾಮು ಮೊಂಡನೋ ಮೊಂಡ
ಬೀದಿಯೊಳಗೆ ಅವ ಬಲು ಭಂಡ
ಗೆಳೆಯರ ಕಾಡಿಸಿ ಎಲ್ಲರ ಛೇಡಿಸಿ
ಕೆಟ್ಟ ಸಹವಾಸಕೆ ತಾ ಬಿದ್ದ

                   (12)
ಪಕ್ಕದ ಮನೆಯಾ ಪುಟಾಣಿ ಸೋಮ
ಮೊಲಗಳ ಕಂಡರೆ ಅವನಿಗೆ ಪ್ರೇಮ
ಮನೆಯಲಿ ಸಾಕಿಹ ಮೊಲಗಳ ಜೋಡಿ
ಜೊತೆಯಲಿ ಪುಟಾಣಿ ಗಿಳಿಗಳ ನೋಡಿ

                        (13)
ಮೊಲಗಳ ಹಿಡಿದು ಚಚ್ಚಿದ ರಾಮು
ಗಿಳಿಗಳ ಕೋಲಲಿ ಚುಚ್ಚಿದ ರಾಮು
ಮೂಕಜೀವಿಗಳು ನೋವಲಿ ನರಳಲು
ನಕ್ಕು ನಲಿಯುತಾ ಹಿಗ್ಗಿದ ರಾಮು

                        (14)
ಪ್ರಾಣಿಗಳೆಂದರೆ ಕರುಣೆಯು ಇಲ್ಲಾ
ಪಕ್ಷಿಗಳೆಂದರೆ ಪ್ರೀತಿಯು ಇಲ್ಲಾ
ಪರರ ನೋವಿನಲಿ ಸಂತಸ ಕಾಣುವ
ರಾಮುವಿನಂಥಾ ದುಷ್ಟರೇ ಇಲ್ಲಾ

                        (15)
ಕೇರಿಯ ಹುಡುಗರು ಆಡುತಲಿರಲು
ಗಾಳಿಪಟಗಳು ಏರುತಲಿರಲು
ರಾಮು ಪಟಗಳಾ ಸೂತ್ರವ ಹರಿದಾ
ಕೈಗೆ ಸಿಕ್ಕಿದಾ ಹುಡುಗರ ಬಡಿದಾ

                        (16)
ಗೆಳೆಯರು ಇವನಿಗೆ ಆಟದ ವಸ್ತು
ಇವನ ಕಾಟಕ್ಕೆ ಆದರು ಸುಸ್ತು
ಪರರ ನಲಿವನು ಸಹಿಸನು ಇವನು
ಕೆಟ್ಟತನಕ್ಕೇ ತವರಿವನು

                        (17)
ರಾಮು ಅರಸುತ ಹೊರಟನು ಮೋಜು
ಸಹಜದೆ ಅವನನು ಸೆಳೆಯಿತು ಜೂಜು
ಧರ್ಮರಾಯನನೆ ಬಿಡದೇ ಕೆಡವಿತು
ರಾಮುವನೆಂತು ಬಿಟ್ಟೀತು

                        (18)
ದುರಭ್ಯಾಸಗಳ ದಾಸನು ರಾಮು
ದುಡ್ಡಿನ ಕೊರತೆಗೆ ಬಿದ್ದನು ಅವನು
ಅಮ್ಮನ ದುಡಿಮೆಗೆ, ಉಳಿಸಿದ ಸೊತ್ತಿಗೆ
ಕಳ್ಳತನದೆ ಕೈಯಿಟ್ಟನು ರಾಮು

                   (19)
ದುಶ್ಚಟಗಳ ರಕ್ಕಸ ಬೀಸಿದ ಬಲೆಯಲಿ
ಸಿಲುಕಿದ ರಾಮು ವಿವೇಕ ಮರೆತ
ಮನೆಯಲಿ ಹಣವು ಮುಗಿದಿರಲಾಗ
ದಾರಿಹೋಕರಿಗೆ ಮುಳುವಾದ, ದರೋಡೆಕೋರನು ತಾನಾದ

                        (20)
ಮುದ್ದಿನ ಮಗನು ಮಾಡಿದ ತಪ್ಪು
ತಿಳಿಯದ ತಾಯಿಗೆ ಎಲ್ಲವೂ ಒಪ್ಪು
ದೂರನು ಕೇಳಿ ತಿಳಿಯ ಹೇಳಿದರೆ
ಕೇಳದು ರಾಮುಗೆ ನಲ್ನುಡಿಯೂ
                
                   (21)

ಸಂತರಿಗೆಂದೂ ಸಂತರೇ ದೊರೆವರು
ಭಕ್ತರಿಗೆಂದೂ ಭಕ್ತರೇ ದೊರೆವರು
ದುಷ್ಟತನದ ಆ ದುರುಳ ಜನರಿಗೆ
ದುಷ್ಟರ ಗೆಳೆತನ ದೊರೆಯುವುದು

                        (22)
ನಾಡಲ್ಲೆಲ್ಲಾ ಬಲು ಕುಪ್ರಸಿದ್ಧ
ಲೂಟಿ ದರೋಡೆಗೆ ಸದಾ ಸಿದ್ಧ
ಇಂತಹ ದುಷ್ಟರ ಗುಂಪೊಂದನ್ನು
ರಾಮು ಸಹಜದಲಿ ಸೇರಿದನು

                   (23)
ನಿತ್ಯ ದರೋಡೆಯ ಕಾಯಕ ಹಿಡಿದು
ದಾರಿಹೋಕರನು ಬಡಿದೂ ಸುಲಿದೂ
ಕೊಬ್ಬಿದ ಕಳ್ಳರ ಗುಂಪಿನ ಒಡೆಯಾ
ಗುಂಡಿಗೆ ಸಿಲುಕಿ ಸತ್ತಿರಲು

                   (24)
ದುರುಳನ ದಾಹಕೆ ಕೊನೆಯೇ ಇಲ್ಲಾ
ಹುಟ್ಟಿತು ನಾಯಕನಾಗುವ ಹಂಬಲ
ದುಷ್ಟರ ಸಭೆಯಲಿ ನಡೆಯಿತು ಚರ್ಚೆ
ಆಯಿತು ಪರೀಕ್ಷೆಯ ನಿಷ್ಕರ್ಷೆ

                        (25)
ನಾಯಕನಾಗಲು ಇರಬೇಕು ಧೈರ್ಯ
ಜೊತೆಯಲಿ ತುಂಬಿ ತುಳುಕುವ ಕ್ರೌರ್ಯ
ಇರಲೇಬಾರದು ಚೂರೂ ಕರುಣೆ
ಪ್ರೀತಿವಾತ್ಸಲ್ಯ ಮಮತೆಯ ಸ್ಮರಣೆ                        (26)
ಇಂತಹ ನಾಯಕ ನಮಗೆ ಬೇಕು
ಇದಕೆ ಸಾಕ್ಷಿಯ ತೋರಲು ಬೇಕು
ಪ್ರೀತಿವಾತ್ಸಲ್ಯ ತೋರಿದ ಒಬ್ಬ
ಬಂಧು ಹೃದಯವಾ ತರಲೇಬೇಕು

                        (27)
ಹಾಗೇ ಆಗಲಿ ಎಂದನು ರಾಮು
ಚಿಂತಿಸತೊಡಗಿದ ಯಾರಿಹರೆಂದು
ಜಗದಲಿ ಒಬ್ಬಳೇ ಪ್ರೀತಿಗೆ ತವರು
ತಾಯಿಗಿಂತಾ ಮಿಗಿಲ್ಯಾರಿಹರೂ

                        (28)
ಕೈಯ್ಯಲಿ ಹಿಡಿದನು ಮಿರಿಮಿರಿ ಚೂರಿ
ಸಿಕ್ಕಿತು ನಾಯಕನಾಗುವ ದಾರಿ
ಅಕ್ಕರೆ ಸಕ್ಕರೆ ನೀಡಿದ ಅಮ್ಮನ
ಹೃದಯವಾ ತರಲು ತಾ ಹೊರಟ

                   (29)
ಒಂಬತ್ತು ತಿಂಗಳು ಹೊತ್ತವಳಾ
ಸತ್ತೂ ಸತ್ತೂ ಹೆತ್ತವಳಾ
ಜೀವ ತೆಯ್ದು ತುತ್ತಿಟ್ಟವಳಾ
ಹೃದಯವಾ ಕೊಯ್ಯಲು ತಾ ಹೊರಟ

                        (30)
ದಿನವಿಡೀ ದುಡಿದೂ ದುಡಿದೂ ಬಳಲೀ
ಮಗನ ಸುಖವನೇ ಬಯಸೀ ಕನಲಿ
ಮಲಗಿಹ ತಾಯಿಯ ಕಂಡನು ರಾಮು
ಕಳ್ಳಹೆಜ್ಜೆಯಲಿ ಸನಿಹಕೆ ಬಂದನೂ

                        (31)
ಅಕ್ಕರೆ ಹೃದಯವ ಕಾಣದ ಕುರುಡ
ದುರಾಸೆ ಭೂತಕೆ ಬಲಿಯಾದ
ಅಮ್ಮನ ಎದೆಯನು ಬಗೆದನು
ಪ್ರೀತಿಯ ಹೃದಯವ ತೆಗೆದನು

                        (32)
ಓಡಿದ ನಾಯಕ ನಾನೇ ಎನ್ನುತ
ಪರೀಕ್ಷೆಯಲ್ಲಿ ಗೆದ್ದೆನು ಎನ್ನುತ
ಕಳ್ಳರ ಗುಂಪನು ಸೇರಿದ ಓಡುತ
ತನ್ನ ಸಾಹಸಕೆ ಮೆಚ್ಚುಗೆ ಬಯಸುತ

                        (33)
ಮುತ್ತಿದ ಕಳ್ಳರ ಗುಂಪಿಗೆ ರಾಮು
ತೋರಿದ ತಾಯಿಯ ಹೃದಯವಾ ರಾಮು
ಬಂಧುವ ಹೃದಯವ ಕೇಳಲು ನೀವು
ತಾಯಿಯ ಹೃದಯವ ತಂದಿಹೆನೆಂದಾ

                   (34)
ಬೆಚ್ಚಿ ಬೆರಗಾಯ್ತು ಕಳ್ಳರ ಗುಂಪು
ಇವನ ಕ್ರೌರ್ಯಕೆ ದಂಗಾಯ್ತು
ಹೆತ್ತವಳನ್ನೇ ಕೊಂದಾ ಧೂರ್ತಾ
ನಮ್ಮನ್ನೆಂತೂ ಬಿಟ್ಟಾನು... ನಮ್ಮನ್ನೆಂತೂ ಬಿಟ್ಟಾನು


                        (35)
ಕಳ್ಳರು ನಾವು ದುಷ್ಟರು ನಾವು
ದಾರಿಹೋಕರನು ಸುಲಿಯುವೆವೂ
ನಮ್ಮ ದಾರಿಗೆ ಅಡ್ಡ ಬಂದವರಾ
ಕರುಣೆಯಿಲ್ಲದೆ ಕೊಲ್ಲುವೆವೂ


                   (36)
ದರೋಡೆ ನಮಗೆ ಬದುಕು ಸರಿ
ಅಮ್ಮನ ಪ್ರೇಮ ಅಮೃತ ಅರಿ
ತಾಯಿ ದೇವರನೆ ಕೊಂದಿಹ ನೀನು
ಮಾನವನಲ್ಲಾ... ದೂರ ಸರಿ

                   (37)
ಕಳ್ಳರ ಗುಂಪು ಅಟ್ಟಿತು ರಾಮನ
ಗುಂಪಿಂದಾಚೆಗೆ ಒಂದಾಗಿ
ನಾಯಕನಾಗುವ ಕನಸು ಕರಗಿರಲು
ಮಾಡಿದ ತಪ್ಪು ಅರಿವಾಯ್ತು... ಒಳಗಿಂದೊಳಗೇ ಅಳುಕಾಯ್ತು

                        (38)
ಅಯ್ಯೋ... ನಾನು ಎಂತಹ ಪಾಪಿ
ಎನ್ನುತ ನಡೆದಿರೆ ಮಂಕಾಗಿ
ದೈವವೇ ಹಾದಿಯ ಕಲ್ಲೊಂದಾಗಿ
ಎಡವಿ ಬಿದ್ದನು ಕಾಲಿಗೆ ತಾಗಿ
                  
ಅಮ್ಮಾ... ಅಮ್ಮಾ.... ಅಮ್ಮಾ... ಅಮ್ಮಾ

                        (39)
ಸುರಿಯಿತು ನೆತ್ತರು... ಕಾಲಲಿ ಗಾಯ
ಮಮ್ಮಲ ಮರುಗಿತು ಅಮ್ಮನ ಹೃದಯಾ
          ಅಯ್ಯೋ ನನ್ ಕಂದಾ... ನೋವಾಯ್ತಾ?
ಬೆಚ್ಚಿದ ರಾಮು ಸುತ್ತಲು ಹುಡುಕಲು
ಕಂಡಿತು ಕಂಬನಿಗರೆಯುವ ಹೃದಯ
          ಮಮತೆ ತುಂಬಿದಾ ಅಮ್ಮನ ಹೃದಯಾ


                        (40)
ಅಯ್ಯೋ! ಎಂಥಾ ಪಾಪಿಯು ನಾನು
ನನ್ನಯ ದೈವಕೆ ನಾನೇ ಮೃತ್ಯುವೇ
ಕಾಣುವ ದೇವರ ಕಾಣದೆ ಹೋದೆ
ಘೋರ ಪಾತಕವಾ ನಾ ಗೈದೆ

                   (41)
ತಂದೆ ಇಲ್ಲದ ತಬ್ಬಲಿಯೆಂದು
ರಕ್ತವ ಬಸಿದು ಬೆಳೆಸಿದಳಮ್ಮ
ತಾ ಅರೆಹೊಟ್ಟೆಯ ಉಂಡರು ನನಗೆ
ಮೃಷ್ಟಾನ್ನವನೇ ಇತ್ತಳು ಅಮ್ಮ

                   (42)
ಅನ್ನ ಬೇಡೆಂದು ತಟ್ಟೆಯ ಬಿಸುಟರೆ
ಮರೆಯಲೇ ಕಂಬನಿ ಸುರಿಸಿದಳು
ಬೀದಿಯ ಜಗಳದಿ ಪೆಟ್ಟನು ತಿಂದರೆ
ಮುದ್ದಿಸಿ ನೋವಾ ಮರೆಸಿದಳು

                        (43)
ಕಾಲಿಗೆ ಮುಳ್ಳು ಚುಚ್ಚಿದರಾಗ
ತಾನೇ ನೋವಲಿ ನರಳಿದಳು
ಇದ್ದವಳೊಬ್ಬಳು ನನ್ನಯ ದೇವತೆ
ಜಗ ತೊರೆದರು.... ಇದ್ದಳು ನನ್ನ ಜೊತೆ

                        (44)
ಇಂಥಾ ದೇವತೆ ನನ್ನಮ್ಮನನು
ನಾನೇ ಕೊಂದೆನೇ ಎಂದಳುತ
ಎಂಥಾ ನೋವಲಿ ಜೀವ ಬಿಟ್ಟಳೋ
ಮರುಗಿದ... ಅಮ್ಮಾ ಬೇಕೆನುತ

                   (45)
ರಾಮು ಅಳುತಾ ಅಲೆಯುತಲಿರಲು
ಕಂಡನು ಪಾಳು ಗುಡಿಯೊಂದಾ
ಸುಂದರ ಮೂರುತಿ ಶಿವನಾ ಮುಂದೆ
ಹೊಳೆವಾ ಚೂಪನೆ ತ್ರಿಶೂಲವನ್ನು

(46)
ಅಯ್ಯೋ ಶಿವನೇ ಇಂಥಾ ಪಾಪಿ
ಬದುಕಿರಬಾರದು ಎಂದೆಂದೂ
ಮಾಡಿದ ಪಾಪಕೆ ಕ್ಷಮೆಯೇ ಇಲ್ಲಾ
ತೆಗೆದುಕೋ ಎನ್ನಯ ಜೀವವನಿಂದೂ

                       
(47)
ಢಮ ಢಮ ಢಮರುಗ ಮೊರೆಯುವ ಸದ್ದು
ಕಂಡನು ರಾಮನು ಅಚ್ಚರಿಯೊಂದ
ಮೂಜಗದೊಡೆಯ ನಮ್ಮಯ ಶಿವನು
ಮುಗುಳುನಗುತ್ತಾ ನುಡಿದನೂ ಅವನೂ

(48)
ಪಶ್ಚಾತ್ತಾಪವೇ ಪ್ರಾಯಶ್ಚಿತ್ತಾ
ತಾಳು ನೀ ಕಂದ ಒಂದು ಕ್ಷಣಾ
ಹರಸಿದ ಹರನು ತಾಯ ಹೃದಯವಾ
ಮತ್ತೆ ತುಂಬಿ ಹೊಸ ಚೇತನವಾ

(49)
ಎಲ್ಲೆಡೆಯಲ್ಲಿಯೂ ನಾನಿರಲಾರೆ
ಎಲ್ಲರ ಬಳಿಯಲೂ ನಾ ಬರಲಾರೆ
ಪ್ರೀತಿಯ ಸುಧೆಯಲಿ ಮೀಯಿಸಲಾರೆ
ಅಕ್ಕರೆ ಸಕ್ಕರೆ ತಿನ್ನಿಸಲಾರೆ

(50)
ಅದಕೇ ಅಮ್ಮನ ಮಾಡಿರುವೆ
ಜಗಕೇ ಕೊಡುಗೆಯಾ ನೀಡಿರುವೆ
ಎನ್ನುತ ಶಿವನು ಮರೆಯಾದ
ರಾಮೂ... ಅಮ್ಮನ ಜೊತೆಯಾದ

                        (51)
ಮುದ್ದಿನಾ ಮಕ್ಕಳೇ ನೋಡಿದಿರಲ್ಲಾ
ರಾಮುವಿನಾ ಈ ಕಥೆಯನ್ನು
ಜಗದಲಿ ಎಲ್ಲರೂ ಅವನಂತಲ್ಲಾ
ಮರಳಿ ಪಡೆಯಲೂ ಅಮ್ಮನನು

(52)
ಬಾಳಲಿ ಸಿಗುವಳು ಒಬ್ಬಳೇ ಅಮ್ಮ
ಕೋಟಿ ಸುರಿದರೂ ಬಾರಳೋ ತಮ್ಮಾ
ಬದುಕಿರುವಾಗ ಕಂಬನಿ ತರಿಸದೆ
ಅಮ್ಮನ ಸೇವೆಯ ಮಾಡುತಿರು


(53)
ದುರಳರ ಸಂಗ ಮಾಡದಿರು
ದುರಭ್ಯಾಸಕೆ ಸಿಲುಕದಿರು
ಪ್ರಾಣಿ ಪಕ್ಷಿಯಲಿ ಕರುಣೆಯಿಡು
ಸಿಟ್ಟು ಸಿಡುಕು ಹಟ ಬಿಟ್ಟುಬಿಡು

(54)
ತಾಯಿ ತಂದೆ ಗುರು ಹಿರಿಯರು ತೋರಿದ
ದಾರಿಯಲಿ ನೀ ನಡೆಯಲು ಬೇಕು
ಹೆತ್ತವರಿಗೆ ನೀ ಕೀರ್ತಿಯ ತರಲು
ಜೀವನ ನಿನ್ನದು ಬಲುಧನ್ಯ


No comments:

Post a Comment