Monday, January 19, 2015

ಪುಟ್ಟಕಂದಾ...ಸಂಕರ್ಷಣನ ಮೇಲೊಂದು ಕವನ



ಬೆಟ್ಟದಂಥ ನಿನ್ನ ಎದುರು
ಪುಟ್ಟಕಂದ ಆಡಲು
ಮುಡಿಯಲಡಗಿ ಕುಳಿತ ಚಂದ್ರ
ಮುಗುಳುನಕ್ಕು ನೋಡಲು

ಸರ್ಪ ಭ್ರಾಂತವಾಯಿತೇ?
ಗಂಗೆ ಶಾಂತವಾಯಿತೇ?
ಸುಡುವ ನಿನ್ನ ಮುಕ್ಕಣ್ಣದು
ಮುಚ್ಚಿ ತಣ್ಣಗಾಯಿತೇ?

ಮೊಳಗುತಿದ್ದ ಢಮರುಗ
ಮೃದಂಗದಾ ಮರಣನಾದ
ಸದ್ದಡಗೇ ಹೋಯ್ತೇ? ಕೇಳಿ
ಶಿಶುವ ಗೆಜ್ಜೆನಾದ

ನೆಲೆಸಿದಂಥಾ ರುದ್ರರೂಪ
ಪ್ರಳಯದಾ ಸ್ವರೂಪ
ಕಂಡು ಸ್ನಿಗ್ಧವಾಯ್ತೆ ಇವನ
ಮೊಗದ ಮುಗ್ಧರೂಪ

ಮೊನಚಿನಿಂದ ಮಿನುಗುತ್ತಿದ್ದ
ನಿನ್ನ ಹೊನ್ನ ಶೂಲ
ತನ್ನ ಕಣ್ಣ ಹೊಳಪಿನಿಂದ
ಮಂಕಾಗಿಸಿಹನೇ ಈ ಬಾಲ

ಕಂದ ನುಡಿದ ತೊದಲು ನುಡಿಗೆ
ಪ್ರಳಯನಾದ ಮಣಿಯಿತೇ
ಅವನ ತೊಡರು ನಡಿಗೆ
ತಾಂಡವವನೇ ಮರೆಸಿತೇ?

ಕೊರಳ ಬಳಸಿ ಭುಸುಗುಟ್ಟುವ
ಸರ್ಪ ಮೌನವಾಯಿತೇ?
ಕೈಲಿ ಹಿಡಿದ ಕಪಾಲವದು
ಶಾಂತಿಮಂತ್ರ ಜಪಿಸಿತೇ?

ಬ್ರಹ್ಮ ಸೃಷ್ಟಿ, ವಿಷ್ಣು ಸ್ಥಿತಿ,
ಲಯವದು ಶಿವನಿಂದ
ಎನುವ ವೇದನೀತಿಯದುವೆ
ಸುಳ್ಳಾಯ್ತೆ? ಈ ಪೋರನಿಂದ!


No comments:

Post a Comment