Tuesday, February 9, 2016

ನೀವೂ ಎದ್ದು ನಿಂತು ಹಾಡಿ!ಜನ ಮನದೊಡೆಯಗೆ ನಾಡಿನ ಒಲುಮೆ
ನಿನಗಿದೆ ಎಂದಿಗೂ ಗೆಲುಮೆ
ಪಂಜಾಬು ಸಿಂಧು ಗುಜರಾತ್ ಮರಾಟ ದ್ರಾವಿಡ ಒರಿಯಾ ವಂಗ
ವಿಂಧ್ಯ ಹಿಮಾಲಯ ಯಮುನಾ ಗಂಗಾ ಪಾವನನದಿಯ ತರಂಗ
ನಿನ್ನಯ ಹೆಸರನು ಮೆರೆಸಿ
ನಿನಗಿದೋ ಒಳಿತನು ಬಯಸಿ
ಹಾಡಿವೆ ಗೆಲುವನೆ ಹರಸಿ
ಜನ ಮನದೊಡೆಯಗೆ ನಾಡಿನ ಒಲುಮೆ
ನಿನಗಿದೆ ಎಂದಿಗೂ ಗೆಲುಮೆ
ಗೆಲುಮೆ ಗೆಲುಮೆ ಗೆಲುಮೆ ಭಾರತಕ್ಕೆಂದು ಗೆಲುಮೆ

ಜಯ ಭಾರತ

ರಸಾಯನ ಶಾಸ್ತ್ರ ಭರತನಾಟ್ಯದಲ್ಲಿ..

ನನ್ನ ಗೆಳತಿ ವಿದುಷಿ ಶ್ರೀಮತಿ ಯಶಾ ರಾಮಕೃಷ್ಣ ಉಡುಪಿಯ ಹೆಜ್ಜೆ ಗೆಜ್ಜೆ ನೃತ್ಯಶಾಲೆಯನ್ನು ನಡೆಸುತ್ತಿದ್ದು, ಈ ಬಾರಿಯ ಅವರ ಶಾಲೆಯ ವಾರ್ಷಿಕೋತ್ಸವದಲ್ಲಿ ನನ್ನ ಈ ಪದ್ಯವನ್ನು ಶಾಸ್ತ್ರೀಯ ನೃತ್ಯರೂಪದಲ್ಲಿ ಪ್ರಸ್ತುತ ಪಡಿಸಿದಳು. ಮಗಳು ದೀಕ್ಷಾ ರಾಮಕೃಷ್ಣ ಎಂಬ ಅದ್ಭುತ ಪ್ರತಿಭೆ ಅಮ್ಮನ ಕೈಜೋಡಿಸಿ ನಿರ್ದೇಶನ ಮಾಡಿ ಈ ಹಾಡಿಗೆ ಜೀವ ತುಂಬಿದಳು.

ಅಜ್ಞಾನದ ಅಂಧಕಾರ ಅಳಿಸುತ್ತ ಸಾಗುವ
ವಿಜ್ಞಾನದ ಸುಜ್ಞಾನವ ಬೆಳಗುತ್ತ ಬಾಳುವ
ಅಣುಕಣಗಳ ತಿಳಿವೆಲ್ಲವ ನಲಿಯುತ್ತಲೆ ಕಲಿಯುವ
ಅರಿಮೆಯಿಂದ ಗರಿಮೆಯತ್ತ ಹಿಗ್ಗಿ ನುಗ್ಗಿ ನಡೆಯುವ

ಜಗದೊಡಲ ಕಣಕಣದಲಿ ಅಣುಅಣುಗಳುಂಟು
ಪ್ರತಿ ವಸ್ತು ಮೈಯೆಲ್ಲಾ ಅಣುಅಣುವಿನಂಟು
ವಸ್ತುವಿಗೆ ಎಡೆಯೊಡನೆ ರಾಶಿಯಾ ನಂಟು
ಇರುವಿಕೆಯು ಅನುಭವಕೆ ಸಿಕ್ಕುವುದು ಉಂಟು

ಮುಬ್ಬಗೆಯ ರೂಪಗಳು ವಸ್ತುಗಳಿಗಿಹುದು
ಒಳಗಿನಾ ಅಣುರಚನೆ ಇದರ ಮೂಲವಹುದು
ಗಟ್ಟಿತನ, ನೀರಗುಣ, ಗಾಳಿಯಾಗಿಹ ಸೊಬಗು
ಅಣುಕೂಟದ ನಡುವ ಸನಿಹ ಸೆಳೆತದ ಬೆಡಗು

ಒಟ್ಟಾಗಿ ಒತ್ತಾಗಿ ಸೆಳೆತದಿಂದಿರೆ ಘನವು
ತುಸು ಸರಿಯೇ ತುಸು ಹರಿಯೇ ಆಗುವುದು ದ್ರವವು
ನಡುವಿನಂತರ ಹಿಗ್ಗಿ ಸೆಳೆತ ಕುಗ್ಗಿರೆ ಅನಿಲ
ವಸ್ತುಗಳ ರೂಪಾಂತರಕಿದುವೆ ಮೂಲ

ಮಂಜುಗಡ್ಡೆಯು ಕರಗಿ ರವಿಕಿರಣದುರಿಗೆ
ಹೊಳೆಯಾಗಿ ಹರಿದು, ಸೇರೆ ಕಡಲನು ಕೊನೆಗೆ
ಆವಿಯಾಗುತ ಆಯ್ತು ಬಾನ ಮಡಿಲಿನ ಮೋಡ
ಘನವಸ್ತು ನೀರಾಗಿ ಅನಿಲವಾಗಿದೆ ನೋಡ

ಮೂರ್ಕಣಗಳು ಒಗ್ಗೂಡಲು ಆಗಿರುವುದು ಅಣು
ನಡುವಿನಲಿ ಹುರುಪಿಲ್ಲದ ನೆಲೆನಿಂತ ಪ್ರೋಟಾನು,
ಜೊತೆಯಲ್ಲಿ ಕೂಡೆಣಿಕೆಯ ಹುರುಪಿನ ನ್ಯೂಟ್ರಾನು
ಸುತ್ತಲೆಲ್ಲಾ ಸುತ್ತುತಿವೆ ಕಳೆವೆಣಿಕೆಯ ಎಲೆಕ್ಟ್ರಾನು

ಅಣುವೆಂಬುವ ಗೂಡಲ್ಲಿವೆ ಕಿರಿಕಣಗಳು ಮೂರು
ಮೂರರಲ್ಲಿ ನ್ಯೂಟ್ರಾನು ನೆಲೆನಿಂತಿಹ ತವರು
ಎಲೆಕ್ಟ್ರಾನು ಪ್ರೋಟಾನು ತಳಮಳಗಳು ಜೋರು
ಸಮಎಣಿಕೆಯ ತುಡಿತವಿರಲು ಅಯಾನ್ ಎಂಬ ಹೆಸರು!

ಒಂದೇ ಬಗೆಯ ಅಣುಗಳು ಒಂದನೊಂದು ಕೂಡಿ
ಆಯಿತಾಗ ಕೂಟವೊಂದು ಎಲಿಮೆಂಟ್ ಎಂಬ ಮೋಡಿ
ಎಲಿಮೆಂಟ್ ಎಂಬ ಬೇರಡಕಕೆ ಉದಾಹರಣೆ ಇಹವು
ಆಮ್ಲಜನಕ, ಕಾರ್ಬನ್ನು ಅವುಗಳಲ್ಲಿ ಕೆಲವು

ಬೇರಡಕ ಬೇರಡಕ ಬೆರೆಯುವುದೂ ಉಂಟು
ಕಾಂಪೌಂಡೆಂಬ ಕೂಡಡಕವೆ ಈ ಎರಡರ ನಂಟು
ಕೂಡಡಕವು ಶುದ್ಧವಾದ ಬೇರಡಕಗಳ ಗಂಟು
ಇದಕೆ ಉಪ್ಪು, ನೀರುಗಳ ಉದಾಹರಣೆಯುಂಟು

ಎಣಿಕೆಯಿಲ್ಲಿ ಸಮಇಲ್ಲದೆ ಅಣುವಲಿ ಅಶಾಂತಿ
ಒಂದೇ ಬಗೆಯ ಅಣುವಿನೆಡೆಗೆ ನೆರವಿಗಾಗಿ ಇಣುಕಿ
ನೆರೆಗೂಡುಗಳೆಡೆ ಕಿರುಕಣಗಳು ಒಂಟಿಕಣವ ಹುಡುಕಿ
ಬೆರೆತು ಜಂಟಿಯಾಗೇ ಅಣುವಿನಲ್ಲಿ ಸ್ಥಿರತೆ ಶಾಂತಿ

ಇಲೆಕ್ಟ್ರಾನು ಹಂಚಿಕೊಳುವ ಬಗೆಯು ಹಲವುಂಟು
ಒಂದು ಬಗೆಯ ಅಣುಬೆಸೆತಕೆ ಹೆಸರು ಕೋವಲೆಂಟು
ಎರಡು ಅಣುಗಳೊಂದೊಂದು ಕಳೆವಣೆಯ ಗಂಟು
ಸಮನಾಗಿ ಹಂಚಿಕೊಳುವ ಬಗೆಯು ಇದರಲುಂಟು

ಅಣು ಅಣುಗಳ ಈ ಬೆಸೆತವೇ ರಸ ಶಾಸ್ತ್ರದ ಸೊಬಗು
ಇಲೆಕ್ಟ್ರಾನು ಹಂಚುವಾಟ ರಸಾಯನದ ಬೆಡಗು
ಅಣುಅಣುಗಳ ನಡುವೆ ಇಹುದು ಮೂರು ಬಗೆಯ ಬೆಸೆತ
ಒಂದಕ್ಕಿಂತ ಒಂದು ಚಂದ ಬೆರಗು ತರುವ ಮಿಳಿತ

ಮೊದಲ ಬಗೆಯು ಹೆಸರಿನಂತೆ ಸರಳ ನೇರ ಬೆರೆತ
ಅಣುಗಳೆರಡು ಎಲೆಕ್ಟ್ರಾನು ಕೊಟ್ಟು ಪಡೆವ ಕಲೆತ
ಆಮ್ಲಜನಕದ ಅಣುಗಳೆರಡು ಸೇರಿದ ಎಲಿಮೆಂಟು 
ಎರಡು ತಾಮ್ರದಣುವ ಬೆರೆಯೆ ತಾಮ್ರದ ಆಕ್ಸೈಡ್ ಬಂತು

ಅಣುವೊಂದರ ಇಲೆಕ್ಟಾನ ಹೊರದೂಡುತ ತಾನು
ಒಳಗೆ ನುಸುಳಿ ಬೆರೆಯುವಾಟ ಆಡುತಿರುವುದೇನು
ಒಂದು ಬೆಸೆಯೆ ಮತ್ತೊಂದಕ್ಕೆ ಬಿಡುಗಡೆಯ ಕಾಲ
ಇದೂ ಒಂದು ಬೆಸೆತ ಬಗೆಯು ಕದಲಿಕೆಯೇ ಮೂಲ

ಗಾಜಿನ ಬಟ್ಟಲ ನೀರಲಿ ಕರಗಿದ ತಾಮ್ರದ ಆಕ್ಸೈಡು
ಅದರಲ್ಲಿ ಕಬ್ಬಿಣ ತುಂಡೊಂದನ್ನು ಮುಳುಗಿಸಿಟ್ಟು ನೋಡು
ಕರಗಿದೆ ಕಬ್ಬಿಣ ಕದಲಿಸಿ ತಾಮ್ರವ ಬೆರೆಯುತ ಆಕ್ಸೈಡು
ಬಿಡುಗಡೆಯಾಗುವ ತಾಮ್ರದ ಕಣಗಳು ತೇಲಿಹುದು ನೋಡು

ಮೂರನೆಯ ಬೆಸೆತದಲಿ ಅಣುಕೂಟದೊಡೆತ
ಅದಲು ಬದಲಿನ ಕೂಟ ತರುತಲಿದೆ ಹೊಸತ
ಅಮೋನಿಯಾ ನೀರಿನಲ್ಲಿ ಬೆರೆಸೆ ಮೈಲುತುತ್ತ
ಮೊದಲಲ್ಲಿ ತಿಳಿನೀಲಿ, ಹೆಚ್ಚಾಗೆ ಕಡುನೀಲಿ ಬಣ್ಣವಾಗಿತ್ತ

ಅಣುಬೆಸೆತ ನಡೆವಾಗ ಹೆಚ್ಚುವುದು ಬಿಸಿಯು
ಬಿಸಿಚೆಲ್ಲುವ ಜೊತೆಗೆ ಬೆಳಕು ಉಕ್ಕುವ ಪರಿಯು
ರಸದ ವಿಜ್ಞಾನವಿದು ಬಿಸುಪು ಬೆಳಕು ಬಣ್ಣದಾಟ
ಹೋಲಿಸುವ ನವರಸಕೆ ಇದರಲಿದೆ ಭಾವದಾಟ

ನವರಸದಿ ಶೃಂಗಾರ ಎಲ್ಲದಕೂ ಮೊದಲು
ಒನಪು ವಯ್ಯಾರದ ಮಡಿಲು ಸೊಗಸಿನಾ ಕಡಲು
ಕಣ್ತಣಿಪ ಬಣ್ಣಗಳು, ಮನದುಂಬುವ ಮಲು
ರಸಾಯನಗಳಾಗಿಹುವು ಜಗದ ಸಿಂಗರದೊಡಲು

ರಸಶಾಸ್ತ್ರದಾ ಧೀರ, ನವರಸದಿ ಗಂಭೀರ
ಹೆಸರಹುದು ಇದಕಿಂದು ಗಂಧಕಾಮ್ಲ
ತಾ ಬೆರೆವ ಎಡೆಯೆಲ್ಲಾ, ಇಲ್ಲವಾಗಿಸಿ ನೀರ
ಇಂಗಿಪುದು ಸೂಸುತ್ತ ವೀರತೇಜ

ರುದ್ರಭೀಕರ ತಾಪ, ರಸಾಯನದ ಈ ರೂಪ
ಸಿಡಿಯುತಿಹ ಮೊಳಗುತಿಹ ನಾಶಕೂಪ!
ಅವಿವೇಕಿ ಮಾನವನ ಬತ್ತಳಿಕೆ ಸೇರಿರ್ಪ
ಕೊಲೆಗಡುಕ ಅಣುಬಾಂಬು ಜಗಕೆ ಶಾಪ

ಕಂಡದ್ದ ತಾ ಅಳಿಸಿ, ಕಣ್ಣೀರ ಹೊಳೆ ಹರಿಸಿ
ಕರುಳ ಕಿವುಚುವ ಸಾವುನೋವಿನಾಟ
ರಸ ರೌದ್ರತೆಯ ಸಿಡಿತ ಸರ್ವನಾಶದ ನೋಟ
ಕಡೆಗುಕ್ಕಿ ಹರಿಯುತಿದೆ ಕಾರುಣ್ಯ ಸಂಕಟ

ನವರಸದಿ ಭೀಭತ್ಸ್ಯ, ವಾಕರಿಕೆ ಹೇವರಿಕೆ
ಕಟುವಾದ ಕೆಡುಕಾದ ಹೊಲಸು ಪ್ರೇತ
ಗಂಧಕದ ಜೊತೆಗೆರಡು ಜಲಜನಕದಣು ಬೆರೆತು
ಕೊಳೆ ಮೊಟ್ಟೆ, ಹಳೆ ಮೀನ ಗಬ್ಬುನಾತ

ನವರಸದಿ ಆಪ್ಯಾಯ, ಮನಗೆಲ್ಲುವಾ ಹಾಸ್ಯ
ಅಲ್ಲುಂಟು ನೂರೆಂಟು ಬಗೆಯ ನಗೆನಂಟು
ನೈಟ್ರಸ್ಸು ಎಂಬಂಥ ರಸಗಾಳಿಯೊಂದುಂಟು
ನಗೆಗಾಳಿ ಸಿಹಿಗಾಳಿ ಹೆಸರು ಹತ್ತೆಂಟು

ರಸದ ಧಾತುಗಳ ಹೊಸೆದು ಬೆಸೆದಿಹನು ಮನುಜ
ಅಣುಬಾಂಬು, ವಿಷಗಾಳಿ ಭುವಿಯ ನಾಶದ ಕಣಜ
ತಾನಳಿದು ಜಗವಳಿದು ಎಲ್ಲಾ ಮುಗಿಸುವ ತವಕ
ಭಯಭೀತ ನಾಳೆಗಳು ಇದನು ತಡೆಯುವ ತನಕ

ಪರಿಸರದ ಓಟಕ್ಕೆ ಇದಿರು ನಿಲ್ಲದ ಅರಿಮೆ
ತಾನುಳಿದು ಜಗವುಳಿಸೆ, ಇದರಲಿದೆ ಹಿರಿಮೆ
ಪರಿಸರದ ಜೊತೆಜೊತೆಗೆ ಸಾಗಬೇಕಿದೆ ಬಾಳು
ಹಸಿರು ಉಸಿರಿನ ಕೂಡ ಶಾಂತತೆಯ ನಾಳು

ರಸಾಯನದ ರಸವಿರದೆ ಇರದು ಲೋಕದಿ ಬದುಕು
ಹುಟ್ಟುಸಾವಷ್ಟೇಕೆ ಅಣುರೇಣು ತೃಣದಿ ಹುಡುಕು
ಮೈಯ್ಯಿರಲಿ, ಉಸಿರಿರಲಿ ಸುತ್ತ ಪರಿಸರವಿರಲಿ
ಎಲ್ಲೆಡೆಯು ನಾನುಂಟೆಂಬ ರಸದರಿಮೆ ಬೆಳಕು

ಅಪಾರ ಕೀರ್ತಿ ಗಳಿಸಿ... ಕನ್ನಡದಲ್ಲಿಹಿರಿಯ ಹೆಸರು ಗಳಿಸಿ ಮೆರೆದ ನಾಡು ನಮ್ಮದು
ಕರುನಾಡು ನಮದು ಹಾಡು ಕುಣಿತಗಳಿಗೆ ಬೀಡಿದು II ಬಲುದೊಡ್ಡ ಹೆಸರಿನಾII

ಕಡಿದು ಸುತ್ತಮುತ್ತಲಿದ್ದ ಕಗ್ಗಾಡನ್ನಾ..
ಕಟ್ಟಿದರು ವಿಜಯನಗರ ವಿದ್ಯಾರಣ್ಯ
ಹಕ್ಕಬುಕ್ಕರಾಳಿ ಹಿರಿಮೆಯನ್ನು ತಾಳಿ
ದಿಕ್ಕು ದಿಕ್ಕುಗಳಲಿ ಶಾಂತಿ ಕಹಳೆಯ ಕೇಳಿ II ಬಲುದೊಡ್ಡ ಹೆಸರಿನಾII

ತಾಯಿ ತುಂಗಭದ್ರೆ ಹರಿಯುತಿಹಳು ಇಲ್ಲಿ
ನಮ್ಮೆಲ್ಲರ ಪಾಪಗಳಾ ತೊಳೆವಳಾಕೆ ಇಲ್ಲಿ II ಬಲುದೊಡ್ಡ ಹೆಸರಿನಾII

ವಿರೂಪಾಕ್ಷಾ ದೇವಾ ಇವನು ನಮ್ಮ ಕಾಯ್ವಾ
ಬಾಳಿಗೆ ತಾ ತೋರುವನು ಬಾಳುವ ಬೆಳಕಾ II ಬಲುದೊಡ್ಡ ಹೆಸರಿನಾII