Tuesday, November 12, 2024

ಕನ್ನಡ ನಾಡೊಂದು ಬೆಲ್ಲದಚ್ಚು!



ಕನ್ನಡನಾಡು ಸಿಹಿ ಬೆಲ್ಲದ ಅಚ್ಚು.

ಮಾಟವಾದ ಸವಿ ಅಚ್ಚುಮೆಚ್ಚು..


ಈ ಬೆಲ್ಲದಚ್ಚಿನ ಹಿಂದೆ...

ಬಂಗಾರದ ನೆಲವ ಹದ ಮಾಡಿ,

ಬಸಿದ ಬೆವರಿನ ಶ್ರಮ ಸುರಿದು

ಕೃಷ್ಣೆ ಕಾವೇರಿ ನೇತ್ರೆಯ ನೀರೆರೆದು

ಕಬ್ಬು ಬೆಳೆದವರು ಕದಂಬರಾದಿ ಒಡೆಯರು...


ಆಲೆಮನೆ ಕಟ್ಟಿ, ಕಬ್ಬಿನಾಲನು ಕುದಿಸಿ

ಹದಗೊಳಿಸಿ ಅಚ್ಚಾಗಿಸಿದವರು ನಾಲ್ವಡಿ, 

ವಿಶ್ವೇಶ್ವರಯ್ಯ ಮೊದಲಾದವರು..

ಅದಕೆ ಸಿಹಿ ಕಂಪ ತುಂಬಿದವರು 

ಪಂಪ ರನ್ನ ಬೇಂದ್ರೆ ಕುವೆಂಪು.. 


ಕನ್ನಡನಾಡು, ಕನ್ನಡತನ 

ಎನ್ನುವುದು ಸಿಹಿ ಸವಿ ಬೆಲ್ಲದಚ್ಚು..

"ಒಂದು ದೇಶ"ವೆಂಬ ಕವಿದ ಮಬ್ಬು

"ಶ್ರೇಷ್ಠ ಭಾರತ"ದ ವ್ಯಸನದ

ಗಾಣದಲ್ಲಿ ಸಿಲುಕಿ ನಲುಗಿರುವ ಕಬ್ಬು!

 

Delimitation ಎನ್ನುವ ಉಪ್ಪಿನಿಂದಾದ 

ಇಂದಿನ ಭಾರತವೆಂಬ ಕಡಲಿನಲ್ಲಿ

ತನ್ನ ಸಿಹಿಯನ್ನು ಕಳೆದುಕೊಳ್ಳುತ್ತಾ.. 

ಕಡಲಿನ ಉಪ್ಪನ್ನೂ ಕಳೆಯಲಾಗದೆ..

ಕರಗಿ ಮರೆಯಾಗುತ್ತಿರುವ ಬೆಲ್ಲದಚ್ಚು!

ನಾ ಕನ್ನಡಿ!

 



ನಾ ಕನ್ನಡಿ..

ನೀನು ನಕ್ಕಾಗ ನಗುವ

ನೀನು ಅತ್ತಾಗ ಅಳುವ

ನೀನೇ ನಾನಾಗಿರುವ

ನನ್ನದೆನ್ನುವ ಏನೂ ಇಲ್ಲದ

ನಾನು ಕನ್ನಡಿ..


ಹಾಂ! ಎಚ್ಚರ.. 

ಅಸಡ್ಡೆಯಿಂದ ಬೀಳಿಸಿದರೆ 

ಒಡೆದು ಹೋದೀತು ಕನ್ನಡಿ.. 

ಕಲಕಿ ಹೋದೀತು ಬಿಂಬಗಳು..

ಬೆಸೆಯಲು ಆದೀತೆ ಹಿಂದಿನಂತೆ.. 

ಮತ್ತೆಂದಿನಂತೆ?


ಸಿಂಗಾರ ಬಂಗಾರ ಬೇಡ

ಆಗಾಗ ಕೂಡಿಕೊಂಡ ಧೂಳನ್ನು

ಒರೆಸುವಷ್ಟಾದರೂ ಸಮಯವಿರಲಿ

ಸಹನೆಯಿರಲಿ