Showing posts with label ಕವನ. Show all posts
Showing posts with label ಕವನ. Show all posts

Tuesday, May 2, 2017

ಹೊಸಕಲ್ಲು ಕಾಲ: ಸಂಗನಕಲ್ಲು


(ರಾಷ್ಟ್ರೀಯ ಹೆದ್ದಾರಿಗಾಗಿ ಬಲಿಯಾಗಲಿರುವ ಐತಿಹಾಸಿಕ ಬೂದಿ ಕಣಿವೆ ಹೊಸಕಲ್ಲು ಕಾಲದ ಪುರಾವೆಗಳು - ಸುದ್ದಿ)
ಸಂಗನಕಲ್ಲು, ತೋರಣಗಲ್ಲು, ಬೂದಿಕಣಿವೆ
ಬಹುಶಃ ನಿಮಗವು ಕಲ್ಲು ಬೂದಿ ಕಣಿವೆ
ಆದರೆ ನಮಗೆ ಅಸ್ತಿತ್ವದ, ಮೊದಲ ಗುರುತು!
ನಮ್ಮ ಹಿರಿಯರಿದ್ದ ನೆಲೆಗಳು 
ಬಹುಶಃ ನಿಮಗೆ ತರಿದುಬಿಡಬಹುದಾದ ಪಾಳು ನೆಲ,
ನಮಗವು ಅಮರಾವತಿಯಂತೆ ಸ್ವರ್ಗದೂರು...
ನಮ್ಮ ಹಿರಿಯರ ಸಮಾಧಿಗಳು
ಬಹುಶಃ ನಿಮಗೆ ಸರಿಸಿಬಿಡಬಹುದಾದ ಗೋರಿಗಳು
ಆದರವು ನಮಗೆ ಗುಡಿ ಗುಡಾರಗಳು..
ಹೊಸ ಕಲ್ಲುಕಾಲದ ಕುರುಹುಗಳು
ಬಹುಶಃ ನಿಮಗವು ಪ್ರಗತಿ ಪಥದ ಅಡ್ಡಗಾಲುಗಳು
ಆದರೆ ನಮಗೆ ಬತ್ತದ ಸ್ಪೂರ್ತಿಯ ಪಾದಧೂಳಿಯ ಹಾರೈಕೆ..

Tuesday, February 9, 2016

ನೀವೂ ಎದ್ದು ನಿಂತು ಹಾಡಿ!



ಜನ ಮನದೊಡೆಯಗೆ ನಾಡಿನ ಒಲುಮೆ
ನಿನಗಿದೆ ಎಂದಿಗೂ ಗೆಲುಮೆ
ಪಂಜಾಬು ಸಿಂಧು ಗುಜರಾತ್ ಮರಾಟ ದ್ರಾವಿಡ ಒರಿಯಾ ವಂಗ
ವಿಂಧ್ಯ ಹಿಮಾಲಯ ಯಮುನಾ ಗಂಗಾ ಪಾವನನದಿಯ ತರಂಗ
ನಿನ್ನಯ ಹೆಸರನು ಮೆರೆಸಿ
ನಿನಗಿದೋ ಒಳಿತನು ಬಯಸಿ
ಹಾಡಿವೆ ಗೆಲುವನೆ ಹರಸಿ
ಜನ ಮನದೊಡೆಯಗೆ ನಾಡಿನ ಒಲುಮೆ
ನಿನಗಿದೆ ಎಂದಿಗೂ ಗೆಲುಮೆ
ಗೆಲುಮೆ ಗೆಲುಮೆ ಗೆಲುಮೆ ಭಾರತಕ್ಕೆಂದು ಗೆಲುಮೆ

ಜಯ ಭಾರತ

Monday, January 19, 2015

ಪುಟ್ಟಕಂದಾ...ಸಂಕರ್ಷಣನ ಮೇಲೊಂದು ಕವನ



ಬೆಟ್ಟದಂಥ ನಿನ್ನ ಎದುರು
ಪುಟ್ಟಕಂದ ಆಡಲು
ಮುಡಿಯಲಡಗಿ ಕುಳಿತ ಚಂದ್ರ
ಮುಗುಳುನಕ್ಕು ನೋಡಲು

ಸರ್ಪ ಭ್ರಾಂತವಾಯಿತೇ?
ಗಂಗೆ ಶಾಂತವಾಯಿತೇ?
ಸುಡುವ ನಿನ್ನ ಮುಕ್ಕಣ್ಣದು
ಮುಚ್ಚಿ ತಣ್ಣಗಾಯಿತೇ?

ಮೊಳಗುತಿದ್ದ ಢಮರುಗ
ಮೃದಂಗದಾ ಮರಣನಾದ
ಸದ್ದಡಗೇ ಹೋಯ್ತೇ? ಕೇಳಿ
ಶಿಶುವ ಗೆಜ್ಜೆನಾದ

ನೆಲೆಸಿದಂಥಾ ರುದ್ರರೂಪ
ಪ್ರಳಯದಾ ಸ್ವರೂಪ
ಕಂಡು ಸ್ನಿಗ್ಧವಾಯ್ತೆ ಇವನ
ಮೊಗದ ಮುಗ್ಧರೂಪ

ಮೊನಚಿನಿಂದ ಮಿನುಗುತ್ತಿದ್ದ
ನಿನ್ನ ಹೊನ್ನ ಶೂಲ
ತನ್ನ ಕಣ್ಣ ಹೊಳಪಿನಿಂದ
ಮಂಕಾಗಿಸಿಹನೇ ಈ ಬಾಲ

ಕಂದ ನುಡಿದ ತೊದಲು ನುಡಿಗೆ
ಪ್ರಳಯನಾದ ಮಣಿಯಿತೇ
ಅವನ ತೊಡರು ನಡಿಗೆ
ತಾಂಡವವನೇ ಮರೆಸಿತೇ?

ಕೊರಳ ಬಳಸಿ ಭುಸುಗುಟ್ಟುವ
ಸರ್ಪ ಮೌನವಾಯಿತೇ?
ಕೈಲಿ ಹಿಡಿದ ಕಪಾಲವದು
ಶಾಂತಿಮಂತ್ರ ಜಪಿಸಿತೇ?

ಬ್ರಹ್ಮ ಸೃಷ್ಟಿ, ವಿಷ್ಣು ಸ್ಥಿತಿ,
ಲಯವದು ಶಿವನಿಂದ
ಎನುವ ವೇದನೀತಿಯದುವೆ
ಸುಳ್ಳಾಯ್ತೆ? ಈ ಪೋರನಿಂದ!