Showing posts with label ನಿಸರ್ಗ. Show all posts
Showing posts with label ನಿಸರ್ಗ. Show all posts

Saturday, June 11, 2011

ತೀರದ ಹೋರಾಟ



















ಕಡಲಲಿ ಅಲೆಗಳ ಮೊರೆತ
ತಡಿಯಲಿ ತೀರದ ಕೊರೆತ
ಹಿಂದೆ ಹಿಂದೆ ಸರಿದರೂ ದಡ
ಉಕ್ಕುವ ಅಲೆಗಳಿಗಿಲ್ಲ ದುಗುಡ II

ಅಲೆಗಳ ರಭಸದ ಕೊರೆತ
ಗೋರ್ಕಲ್ಲೂ ಕರಗೋದು ನಿಶ್ಚಿತ
ನೋಡುಗರಿಗಿದು ಕಣ್ಣಿಗೆ ಹಿತ
ದಡಕೆ ಅಳಿವು ಉಳಿವಿನ ನಿತ್ಯಹೋರಾಟ II

Tuesday, April 19, 2011

ರೈತಣ್ಣಾ...


















ಹೊತ್ತು ಮೂಡುವ ಮುನ್ನ

ಎತ್ತು ಹೂಡುವನಣ್ಣಾ

ಉತ್ತು ಭೂಮಿಯ ಮಣ್ಣ

ಬಿತ್ತುತಾ ಬೆಳೆವನು ಚಿನ್ನ !!

(ಆನಂದ್ - 1992)

Monday, January 3, 2011

ನನ್ನೊಳಗಿನಾ ಹಾಡು




















ನನ್ನೊಲವಿನಾ...
ನನ್ನೊಳಗಿನಾ...
ಕೋಗಿಲೆಗೆ ಈಗಲೇ
ಹಾಡುವಾಸೆ    II

ಈ ಹಾಡಿನಾ ಒಳಗೇ
ಶೃತಿಯಿಲ್ಲ... ಗತಿಯಿಲ್ಲ
ಸಿರಿಯ ಸೊಬಗಿಲ್ಲಾ...
ಮೆರುಗಿನಾ ಪದವಿಲ್ಲಾ...    II

ರಾಗಗಳ ಇಂಪಿಲ್ಲಾ...
ಭಾವಗಳ ಸೊಂಪಿಲ್ಲಾ...
ತಂಗಾಳಿ ತಂಪಿಲ್ಲಾ
ಈ ಹಾಡಲೀ...    II


ನನ್ನೊಲವಿನಾ...
ನನ್ನೊಳಗಿನಾ...
ಕೋಗಿಲೆಗೆ ಈಗಲೇ 
ಹಾಡುವಾಸೆ    II

(ಆನಂದ್ - 1994)

Friday, December 31, 2010

ಗೀಜಗನ ಗೂಡಿನಲಿ...

ಚಿತ್ರ ಕೃಪೆ: www.madibirder.blogspot.com
ಗೀಜಗನ ಗೂಡಿನಲಿ
ಈ ಜಗದ  ಕಥೆಯಿಹುದು
ಸೋಜಿಗದ ವ್ಯಥೆಯಿಹುದು... ಬಂದು ನೋಡಾ II

ಅಂದು

ದಟ್ಟ ಹಸುರಿನ ನಡುವೆ
ಪುಟ್ಟಗೂಡುಗಳೆಡೆಗೆ
ಕೆಟ್ಟಮನುಜನ ದಿಟ್ಟಿ ಸೋಕದಂತೆ  II

ಎತ್ತ ನೋಡಲು ಕಾಡು
ಸುತ್ತ ಚೆಲ್ಲಿದ ಕಾಳು
ಹೆಕ್ಕಿ ತಿನ್ನಲು ಉಂಟು ಹುಳ ಹುಪ್ಪಟೆ  II

ಹೊರಗೆಲ್ಲ ಹಿಮಗಾಳಿ
ಮೈ ನಡುಗಿಸಿರಲು ಛಳಿ
ಬೆಚ್ಚನೆಯ ಗೂಡಲ್ಲಿ ಅಮ್ಮ ತಬ್ಬಿ  II

ಇಂದು

ಸುರಿಯಲಿಲ್ಲವೋ ಮಳೆಯು
ಒಣಗಿ ನಿಂತಿದೆ ಇಳೆಯು
ಉರಿಬಿಸಿಲು ಹೊರಗೆಲ್ಲಾ, ಗೂಡು ಬೆಂಕಿ  II

ಇಟ್ಟ ಮೊಟ್ಟೆಗಳೆಲ್ಲಾ
ಹುಟ್ಟಿರಲು ಅರೆ ಕಾವಿಗೆ
ಪುಟ್ಟ ಹಕ್ಕಿಗಳೆಲ್ಲಾ ಬಡಕಲಾಗಿ  II

ರೆಕ್ಕೆಯಲಿ ಬಲವಿಲ್ಲ
ಕೊಕ್ಕಿನಲಿ ಹುಳವಿಲ್ಲ
ಹೆಕ್ಕಿ ತಿನ್ನಲು ಸುತ್ತ ಕಾಳು ಒಂದಿಲ್ಲ  II

ಹಸಿರ ಸುಟ್ಟರು ಅವರು
ಉಸಿರ ಬಿಟ್ಟೆವು ನಾವು
ಹೆಸರಾದರೂ ಉಳಿದೀತೆ ಕಟ್ಟಕಡೆಗೆ II

(ಆನಂದ್ - 1999)