Showing posts with label ಪ್ರೇಮ. Show all posts
Showing posts with label ಪ್ರೇಮ. Show all posts
Tuesday, May 10, 2011
Friday, April 22, 2011
ಕೃತಜ್ಞತೆ
ಗೆಳತಿ... ಕೃತಜ್ಞ ನಾ ನಿನಗೆ
ಬಾಳಿನೆಲ್ಲ ನೋವು ನುಡಿಯಲು
ಸಂತಸವ ಹಂಚಿಕೊಳಲು
ಉಳಿದಿರುವ ಆತ್ಮೀಯಳು ನೀನಲ್ಲವೆ?
ಬಾಳಕಹಿ ನುಡಿದಾಗ
ಸ್ನೇಹಸವಿ ತುಂಬುವಾ
ನಿರಾಶೆಯ ಬಾಳಿಗೆ
ಉತ್ಸಾಹವೀಯುವಾ
ಗೆಳೆತನ ನಿನ್ನ ಕಣ್ಣಲಿದೆ ಗೆಳತಿ II
ನಿನ್ನ ಸಾಂತ್ವನದ ನುಡಿ
ಲೋಕವನ್ನೇ ಗೆಲ್ಲುವ ಛಲ ತಂದಿದೆ
ಆಡಿದವರ ನಾಲಗೆ ಸೀಳುವ
ಬಲತಂದಿದೆ ಗೆಳತಿ... II
ನುಡಿಯಲಾಗದ ಭಾವಗಳನ್ನೂ
ನನ್ನ ಮನದಿಂದ ಹೊರತೆಗೆದು
ಹೆರೆಯನಿಲಿಸಿ, ನನ್ನ ಉಸಿರಾದ ನಿನಗೆ
ನನ್ನ ಕಡೆಯ ಉಸಿರಿನವರೆಗೂ ಕೃತಜ್ಞ! II
Thursday, April 21, 2011
ಸ್ಥಾನಮಾನ
ಗೆಳತಿ,
ನಿನಗಾಗಿ ಸೃಷ್ಟಿಸಿ ಕೊಟ್ಟಿರುವೆ ಒಂದು ಸ್ಥಾನ
ಅದುವೇ ನನ್ನ ಹೃದಯ ಸಿಂಹಾಸನ
ನಿನ್ನ ನೆನಪಿನ ಇಂಧನ
ನಡೆಸುತಿದೆ ನನ್ನಯಾ ಜೀವನ
ಗೆಳತಿ,
ನನ್ನ ಕಣ್ಣು ನಾನೇ ಆದರೂ
ಅದರ ನೋಟ ನೀನು
ನನ್ನ ದೇಹ ನೀನೇ ಆದರೂ
ಅದರ ಉಸಿರು ನೀನು
ನೀನಿಲ್ಲದಿರೆ ಈ ಜೀವನ
ಕೊನೆಯಾಗಲಿ ಅಗಲಿಕೆಯ ಮರುಕ್ಷಣ
ಆಕ್ರಮಿಸಿರುವೆ ನೀ ನನ್ನ ಕಣಕಣ
ನಿನ್ನಾಸರೆಯೇ ನನ್ನ ಜೀವ ಸ್ಪಂದನ
ನಿನಗಾಗಿ ಕೊಟ್ಟಿರುವೆ ಸ್ಥಾನ
ಶಾಶ್ವತ, ಇರುವವರೆಗೂ ನನ್ನ ಪ್ರಾಣ
(ಆನಂದ್ - 1989)
Tuesday, April 19, 2011
ನನ್ನಾಸೆ
ಗೆಳತಿ,
ನನಗಿಹುದೊಂದಾಸೆ
ನನ್ನಾಸೆಗಳ ನಿನ್ನಲ್ಲಿ ನುಡಿವಾಸೆ
ನಿನ್ನ ಮಡಿಲಲ್ಲಿ ತಲೆಯಿಟ್ಟು
ಕನಸ ಹೆಣೆಯುವಾ ಆಸೆ
ಕಂಡ ಕನಸುಗಳ ನನಸಾಗಿ
ಕಾಣಲು ಬಲು ಆಸೆ!
ನಿನ್ನ ಕಣ್ಣ ಮಿಂಚಾಗಿರಲು ಆಸೆ
ನಿನ್ನ ತುಟಿಯ ನಗುವಾಗಿರಲು ಆಸೆ
ನೀ ಕಾಣುವ ಕನಸಾಗಿರುವ ಆಸೆ
ಗೆಳತಿ,
ನಿನ್ನಾಸೆಗಳ ಆಸರೆಯಾಗಲು ಬಲು ಆಸೆ
ನಿನ್ನ ನಾಚಕೆಯ ನೋಟವಾಗಲಾಸೆ
ನಿನ್ನ ತೂಗುವ ಮುಂಗುರುಳಾಗುವಾಸೆ
ನಿನ್ನ ಕನಸೆನೆಲ್ಲಾ ಆಕ್ರಮಿಸುವಾಸೆ
ನಿನ್ನ ಮನದಲ್ಲಿ ಸ್ಥಿರವಾಗಿರಲೆನಗಾಸೆ!
ನಿನ್ನ ಬದುಕು ಸುಖವಾಗಿರಲೆಂಬಾಸೆ
ಅದಕಾಗಿ ನನ್ನನರ್ಪಿಸುವ ಮಹದಾಸೆ!!
(ಆನಂದ್ - 1988)
Monday, April 18, 2011
ಬತ್ತದ ಪ್ರೀತಿ
ಬತ್ತಲಾರದು ಗೆಳತಿ
ನಿನ್ನ ಮೇಲಿನ ಪ್ರೀತಿ
ಬತ್ತಲಾದರು ಗೆಳತಿ
ನಿನ್ನ ನಿಜ ರೀತಿ
ಹೊತ್ತಿ ಉರಿವುದು ಜ್ಯೋತಿ
ಸುತ್ತ ಚೆಲ್ಲುತ ಕಾಂತಿ
ಮತ್ತೆ ಆರುವ ಭೀತಿ
ಅದಕ್ಕಿಲ್ಲ ಗೆಳತಿ
ಮಾಡಿದೆ ಹೀಗೇಕೆ ವಂಚನೆ?
ಮಾಡಿಕೋ ಅಂತರಂಗ ಶೋಧನೆ
ನೀನರಿಯೆ ನನ್ನೊಡಲ ವೇದೆನೆ
ಪ್ರೀತಿಗಿಲ್ಲ ನಿನ್ನಲ್ಲಿ ಸಂವೇದನೆ
ನನ್ನ ಪ್ರೀತಿಯ ಹಣತೆ
ಏನಿತ್ತೆ? ಅದರಲ್ಲಿ ಕೊರತೆ
ಕೊಟ್ಟ ಮಾತೆಲ್ಲಾ ಏಕೆ ಮರೆತೆ?
ನನಗೆ ಸದಾ ನಿನ್ನದೇ ಚಿಂತೆ
ಕೆಟ್ಟ ಮಗನೆಡೆಗೆ
ಅವನಮ್ಮನ ಮಮತೆ
ಅವಳ ಹಿರಿಮೆಯಲ್ಲ...
ದೌರ್ಬಲ್ಯವಂತೆ
ಎನಗೆ ನೀನೆಸಗಿದರು
ದ್ರೋಹಗಳ ಕಂತೆ
ದ್ವೇಷಿಸಲಾರೆ ನಾ
ನಿನ್ನನೆಂದಿಗೂ ಕಾಂತೆ!
(ಆನಂದ್ - 1992)
ಕೆಂಗುಲಾಬಿ!
ಬಯಸಿ ಬಯಸಿ ಕೊಂಡೆನೊಂದು
ಗುಲಾಬಿಯ ನಲ್ಲೆಗಾಗಿ!
ನುಡಿದೆ...
ಎಂಥಾ ಚೆಂದ ನಿನ್ನ ಕೆಂಪು
ಬಿರಿದ ನಲ್ಲೆಯ ತುಟಿಯ ಹಾಗೆ,
ಸಂಜೆ ಸೂರ್ಯನ ಹಾಗೆ..
ನನ್ನವಳ ನಾಚಿದ ಕೆನ್ನೆಯ ಹಾಗೆ..
ತಂದಿಹುದು ಎನ್ನೆದೆಗೆ ತಂಪು
ನಿನ್ನಯಾ ಮೋಹಕ ಕಂಪು! ಕೆಂಪು!
ನುಡಿಯತಾ ಗುಲಾಬಿ...
ಗೆಳೆಯಾ...
ಶಾಲಿಮಾರಿನಲ್ಲೀಗ ಅರಳುವುದು
ಕೆಂಗುಲಾಬಿ ಮಾತ್ರ...!
ಆ ಕೆಂಪು...
ಹೊತ್ತಿ ಉರಿವ ಮನೆಗಳಾ!
ಅತ್ತ ಕಂದಮ್ಮಗಳಾ!
ಸತ್ತ ಮುಗ್ಧರಾ ನೆತ್ತರಿನ ಕೆಂಪು
(ಆನಂದ್ - 1994)
ನುಡಿದೆ...
ಎಂಥಾ ಚೆಂದ ನಿನ್ನ ಕೆಂಪು
ಬಿರಿದ ನಲ್ಲೆಯ ತುಟಿಯ ಹಾಗೆ,
ಸಂಜೆ ಸೂರ್ಯನ ಹಾಗೆ..
ನನ್ನವಳ ನಾಚಿದ ಕೆನ್ನೆಯ ಹಾಗೆ..
ತಂದಿಹುದು ಎನ್ನೆದೆಗೆ ತಂಪು
ನಿನ್ನಯಾ ಮೋಹಕ ಕಂಪು! ಕೆಂಪು!
ನುಡಿಯತಾ ಗುಲಾಬಿ...
ಗೆಳೆಯಾ...
ಶಾಲಿಮಾರಿನಲ್ಲೀಗ ಅರಳುವುದು
ಕೆಂಗುಲಾಬಿ ಮಾತ್ರ...!
ಆ ಕೆಂಪು...
ಹೊತ್ತಿ ಉರಿವ ಮನೆಗಳಾ!
ಅತ್ತ ಕಂದಮ್ಮಗಳಾ!
ಸತ್ತ ಮುಗ್ಧರಾ ನೆತ್ತರಿನ ಕೆಂಪು
(ಆನಂದ್ - 1994)
Tuesday, January 11, 2011
Saturday, January 1, 2011
ಓ ಪ್ರಿಯೆ... ಪ್ರಾಣಪ್ರಿಯೆ...
ನಿನ್ನಯ ಪ್ರೇಮದಿ ತೇಲಿದೆನಂದು
ಚಂದದ ಓ ಗೆಳತೀ
ಮತ್ತದೇ ನೆನಪಲಿ ಬಾಳಿಹೆನಿಂದು
ಕೇಳೇ ಓ ಗೆಳತಿ II ಓ ಪ್ರಿಯೇ... ಪ್ರಾಣಪ್ರಿಯೆ II
ಕಾರಣವಿಲ್ಲದೇ
ದೂಡಿದೆ ದೂರಕೇ
ನನ್ನನು... ಏತಕೇ ಅಂದು
ನನ್ನೆದೆ ಕೋಗಿಲೆ
ನರಳಿತು ಅಂದು
ವಿರಹದ ನೋವಲೀ ಬೆಂದು II ಓ ಪ್ರಿಯೇ... ಪ್ರಾಣಪ್ರಿಯೆ II
ಹೃದಯದ ಬಾಗಿಲು
ತೆರೆದಿದೆ ನಿನಗೇ
ಬಾರೆಯಾ ಮರಳಿ ಬಳಿಗೆ
ಬಾಳಿನ ಕತ್ತಲಾ
ನೀಗುವ ಹಣತೆ
ಆಗುವೆಯಾ ನೀ ಗೆಳತಿ II ಓ ಪ್ರಿಯೇ... ಪ್ರಾಣಪ್ರಿಯೆ II
(ಆನಂದ್ - 1994)
Friday, December 31, 2010
ನಗಬೇಡಾ ಗೆಳತೀ ನಗಬೇಡಾ...
ನಗಬೇಡಾ ಗೆಳತಿ ನಗಬೇಡಾ
ಮೇಲೆ ಹುಸಿನಗೆ ಚೆಲ್ಲಿ
ಒಳಗೊಳಗೇ ಅಳುತಳುತಾ II ನಗಬೇಡ II
ತಿಳಿನೀರಾ ತಳದಲ್ಲಿ ರಾಶಿ ರಾಡಿ ಕೆಸರು
ಭೂತಾಯಾ ಗರ್ಭದಲಿ ಬೆಂಕಿ ಬಿಸಿಯುಸಿರು
ಆ ಮುಗಿಲಾ ನಗೆಯಲ್ಲೂ ಬರಿ ಗುಡುಗು ಬರಸಿಡಿಲು
ವ್ಯಥೆ ವಿಷಾದಭರಿತ ಗೆಳತಿ ನಿನ್ನೊಡಲೂ II ನಗಬೇಡ II
ಮರೆತುಬಿಡೂ ನಿನ್ನೆಗಳಾ
ಕಳೆದಾ ಅಮಾವಾಸ್ಯೆಗಳಾ
ನಿನ್ನಾ ಹೆಜ್ಜೆಗೆ ನಾನು ಹೆಜ್ಜೆಯಾಗೀ ಬರುವೆ
ಬಾಳ ಬೆಳಗುವ ಜ್ಯೋತಿಯಾಗಿ
ಕಣ್ಣಾ ತುಂಬಿದಾ ಕಾಂತಿಯಾಗಿ II ನಗಬೇಡ II
(ಆನಂದ್ - 1994)
ನನ್ನಾಕೆಗೆ
ಹಸುಗೂಸ ಮೊಗದವಳೇ
ನಸುನಾಚಿ ನಿಂತವಳೇ
ಹಸನಾದ ನಗೆಯವಳೇ II ಮುತ್ತ ಕೊಡಲೇII
ಸುಪ್ತಮನದಾಳದಲಿ
ಗುಪ್ತಗಾಮಿನಿಯಾಗಿ
ತಪ್ತಭಾವಗಳು ಕಡೆದಿರುವ ಮುತ್ತು II ಮುತ್ತ ಕೊಡಲೇII
ಸ್ನೇಹದಾ ಚಿಪ್ಪಿನಲಿ
ಭಾವಗಳ ಸ್ವಾತಿಹನಿ
ನೆನಪುಗಳ ಕಾವಿನಲಿ ಕಟ್ಟಿರುವ ಮುತ್ತು II ಮುತ್ತ ಕೊಡಲೇII
ಹೃದಯ ಸಾಗರ ತಳದಿ
ಹುದುಗಿರುವ ಮುತ್ತಗಳಾ
ಹೆಕ್ಕಿಕೊಳ್ಳಲು ಬಾರೆ ಅಂತರಂಗಕೆ ನೀರೇ II ಮುತ್ತ ಕೊಡಲೇII
(ಆನಂದ್ - 1996)
Subscribe to:
Posts (Atom)














