Saturday, March 9, 2024

ಶಿವರಾತ್ರಿಯಂದು ಅಮ್ಮನ ಬಯಕೆ!




ತ್ರೇತಾಯುಗದಲ್ಲಿ...

ಅಮ್ಮ...

ಶಿವನ ಲಿಂಗ ಬಯಸಿದಳಂತೆ.

ಮಗ.. 

ತಪಸ್ಸು ಮಾಡಿ ಆತ್ಮಲಿಂಗವನ್ನೇ 

ತರಲು ಮುಂದಾದನಂತೇ!


ಕಲಿಯುಗದಲ್ಲಿ...

ಅಮ್ಮ,

ಶಿವರಾತ್ರಿಗೆ ಶಿವನ 

ದರ್ಶನ ಬಯಸಿದಳಂತೆ..

ಮಗ..

ಶಿವನ ಪ್ರತಿಮೆಯನ್ನೇ ಮಾಡಿ

ಅಮ್ಮನ ಕೈಗಿಟ್ಟನಂತೆ!

ಮಹಿಳಾ ದಿನಾಚರಣೆ



ಇವತ್ತು ಮಹಿಳಾ ದಿನಾಚರಣೆ ಅಂತೆ.. 

ಯಾವನ್ಲಾ ಇದನ್ನು ಶುರು ಮಾಡಿದ್ದು?

ನಮ್ಮನೇಲಿ ಬೆಳಗ್ಗೆ ಏಳೋದೂ 

ಇವಳ ಮೊಬೈಲ್ ಅಲಾರಾಂ ಹೊಡೆದಾಗಲೆ..


ಎದ್ದು ಕಾಫಿ ಕುಡಿಯೋದೂ 

ಇವಳು ಕೊಟ್ಟಾಗಲೆ..

ಇವತ್ತು ಯಾವ ಅಂಗಿ ಹಾಕ್ಕೊಬೇಕೂ 

ತೀರ್ಮಾನ ಮಾಡೋದೂ ಇವಳೇ..


ತಿಂಡಿ ಏನು ಮಾಡಬೇಕೋ 

ತೀರ್ಮಾನ ಮಾಡೋದೂ ಇವಳೇ..

ಅಡುಗೆಗೆ ಎಷ್ಟು ಉಪ್ಪು, ಕಾಫಿಗೆ ಎಷ್ಟು ಸಕ್ಕರೆ ಅಂತಾ 

ತೀರ್ಮಾನ ಮಾಡೋದೂ ಇವಳೇ..


ನಾವೂ ತಿಂಡಿ ಊಟ ಮಾಡೋದು 

ಇವಳು ಬಡಿಸಿದಾಗಲೆ.. ಬಡಬಡಿಸಿದಾಗಲೆ..

ನಮ್ಮ ಮನೆ ಬಾಗಿಲು, ನನ್ನ ಜೇಬಿನ ಪರ್ಸು.. 

ಎಲ್ಲಾದಕ್ಕೂ ಕೀಲಿ ಇರೋದು ಇವಳ ಕೈಲೇ..


ಕಡೆಗೆ.. 

ನಾನು ಮಲಗೋದೂ ಕೂಡಾ 

"ಇನ್ನೂ ಎಷ್ಟೊತ್ತು ಕಂಪ್ಯೂಟರ್ ಮುಂದಿರ್ತೀರಾ.. 

ಬಂದು ಬಿದ್ಗೊಳ್ಳಿ"  ಅಂದಾಗಲೇ..


ಹೀಗೆ ಪ್ರತಿದಿವಸ ಕೂಡಾ 

ನಮ್ಮನೇಲಿ ಮಹಿಳಾ ದಿನಾಚರಣೆ.. 


ಅಂತಾದ್ರಲ್ಲಿ...

ಇವತ್ತು ಮಹಿಳಾ ದಿನಾಚರಣೆ ಅಂತೆ.. 

ಯಾವನ್ಲಾ ಅವ್ನು.. ಇದನ್ನು ಶುರು ಮಾಡಿದ್ದು?

Wednesday, February 14, 2024