Sunday, June 12, 2011

ಮುದಿಹದ್ದು - ಮರಿಗುಬ್ಬಿಅಗೋ ಕುಳಿತಿವೆ ನೋಡು ಮುದಿಗೂಬೆಗಳು
ಹಾರಲಾಗದೆ ಹೊಂಚುಹಾಕುವ ರಣಹದ್ದುಗಳು
ಹಾರುವುದು ಹೇಗೆಂದು ಉಪದೇಶ ನೀಡುತ್ತಾ
ಹಾರದ ಗುಬ್ಬಿಗಳ ಹಿಡಿದು ತಿಂದಿಹವು II

ಗುಬ್ಬಿಗಳ ಕುಕ್ಕುವುದು ಹೇಗೆಂದು ಅರಿತು
ಕಾಗೆಗಳ ಜೈಕಾರದಲಿ ಮೈಯ್ಯ ಮರೆತು
ಹಸಿ ಮಾಂಸ ಹರಿದ್ಹರಿದು ಮುಕ್ಕುತಿವೆ ನೋಡು
ಪಾಪಾ! ಗುಬ್ಬಿಗಳ ನರಳಾಟ! ನಾಯಿಪಾಡು II

ಕುಂತರೆ ತಪ್ಪು! ಹಾರಿದರೆ ತಪ್ಪು! ಹಾಡಿದರೆ ತಪ್ಪು!
ಮೌನವೂ ತಪ್ಪು! ಕಾಳ ಹೆಕ್ಕಲು ತಪ್ಪು!
ಹಿಕ್ಕೆ ಹಾಕಲು ತಪ್ಪು! ಚಂದವಿರುವುದು ತಪ್ಪು!
ತಪ್ಪು ಹುಡುಕುವುದೊಂದೆ ಇವಕ್ಕೆ ಒಪ್ಪು II

ಮರಿಗುಬ್ಬಿಗಳಿಗೆ ನುಡಿದಿವೆ ಇವು
ಹಾಗಿರಬೇಕು - ಹೀಗಿರಬೇಕು ನೀವು
ಹಿಂದೆಲ್ಲ ಯೌವನದಿ ಹಾಗಿದ್ದೆವು ನಾವು
ಕೇಳದಿದ್ದರೆ ಕಾದಿಹುದು ನಮ್ಮಿಂದ ಸಾವು II

ನೋಡು! ನಮ್ಮಂತೆ ನಿನಗಿರಲಿ ಕೊಕ್ಕು
ರೆಕ್ಕೆ ಇರಬೇಕು ಇಷ್ಟೂ ಅಗಲಕ್ಕು
ಇಲ್ಲವೆಂದರೆ ಮತ್ತೆ ಮತ್ತೆ ಕುಕ್ಕು
ಬದುಕಬೇಕೆಂದರೆ ನಮ್ಮ ಪಾದ ನೆಕ್ಕು II

ಮರಿಗುಬ್ಬಿ, ನಿನಗೆ ಹದ್ದಾಗೋ ಕನಸು ಬೇಡ
ಜೀವ ಉಳಿಯಲು ಇರುವ ದಾರಿ ನೋಡ
ಜೈಕಾರ ಹಾಕುವ ಕಾಗೆಯಾಗು
ಹದ್ದುಳಿಸಿದ ಹೆಣತಿಂದು ಬದುಕು ಹೋಗು II

(ಯಾವುದೇ ಕಛೇರಿಯಲ್ಲಿ ನಡೆಯೋ ಮೀಟಿಂಗುಗಳಲ್ಲಿ ಇಂಥಾ ಹಿರಿ-ಮುದಿ ಹದ್ದುಗಳು ಸಾಮಾನ್ಯ!)

Saturday, June 11, 2011

ಅಭಿಮಾನದಿಂದ ವಿಷ್ಣು ಜೊತೆ...


ಅದು ಸುಮಾರು ೧೯೮೧-೮೨ರ ಕಾಲ, ಕೆ.ಆರ್. ಸಾಗರಕ್ಕೆ ಗೆಳೆಯರ ಜೊತೆ ಹೋಗಿದ್ದಾಗ "ಊರಿಗೆ ಉಪಕಾರಿ" ಚಿತ್ರದ ಶೂಟಿಂಗಿಗೆ ಬಂದಿದ್ದ ವಿಷ್ಣು ಜೊತೆ ತೆಗೆಸಿಕೊಂಡ ಫೋಟೋ... ಹಸಿರು ಹಸಿರು ಭೂಮಿಯಲೆಲ್ಲಾ ಹಾಡು ಕೇಳಿದಾಗೆಲ್ಲಾ ಹಸಿರಾಗುವ ನೆನಪುಗಳು...

ಸ್ಪರ್ಧೆಯೊಂದರಲ್ಲಿ...


ಸುರಕ್ಷತೆ ಮೊದಲು..


ನಾ ಹಾಡಲು... ನೀವು ಕೇಳಬೇಕು!ನಮ್ಮ ಸಂಸ್ಥೆಯ ಕಾರ್ಯಕ್ರಮದಲ್ಲಿ ಹಾಡಿದಾಗ...

ನನ್ನ ಪುಟ್ಟನ ಕುದುರೆ...


ನನ್ನ ಪುಟ್ಟ ಸಂಕೀರ್ತನ ಬೇಕು ಅಂದಾಗ ಬರೆದು ತೋರಿಸಿದ್ದು...

ಮೊದಲೊಂದಿಪೆ ನಿನಗೆ...

ನನ್ನ ಪ್ರೀತಿಯ ಸಂಕರ್ಷಣನ ಕಣ್ಣಲ್ಲಿ ಅಚ್ಚರಿ ಬೆರಗಿಗೆ ಕಾರಣವಾಗುವಂತೆ ಅವನು ನೋಡುತ್ತಲೇ ಬರೆದ ಚಿತ್ರ. ಒಂದು ಮದುವೆ ಕರೆಯೋಲೆಯ ಬೆನ್ನಿಗಿದ್ದ ಚಿತ್ರ ಇದು...

ನನ್ನ ಪ್ರೀತಿಯ ಶಂಕರ...


ಇದು ಶಂಕರ್ ನಾಗ್ ಅವರ ಜಯಭೇರಿ ಅನ್ನೋ ಚಿತ್ರದ ವಾಲ್ ಪೋಸ್ಟರ್ ನೋಡಿಕೊಂಡು ೧೯೯೦ರಲ್ಲಿ ಬರೆದದ್ದು... ಕೆಲವೇ ತಿಂಗಳಲ್ಲಿ ಶಂಕರ್ ನಾಗ್ ನಮ್ಮಿಂದ ಮರೆಯಾದರು. ಅವರಿಗೆ ಈ ಚಿತ್ರ ತೋರಿಸೋ ಆಸೆ ಇತ್ತು. ಆಸೆ ಹಾಗೇ ಉಳಿಯಿತು...

ತೀರದ ಹೋರಾಟಕಡಲಲಿ ಅಲೆಗಳ ಮೊರೆತ
ತಡಿಯಲಿ ತೀರದ ಕೊರೆತ
ಹಿಂದೆ ಹಿಂದೆ ಸರಿದರೂ ದಡ
ಉಕ್ಕುವ ಅಲೆಗಳಿಗಿಲ್ಲ ದುಗುಡ II

ಅಲೆಗಳ ರಭಸದ ಕೊರೆತ
ಗೋರ್ಕಲ್ಲೂ ಕರಗೋದು ನಿಶ್ಚಿತ
ನೋಡುಗರಿಗಿದು ಕಣ್ಣಿಗೆ ಹಿತ
ದಡಕೆ ಅಳಿವು ಉಳಿವಿನ ನಿತ್ಯಹೋರಾಟ II

Tuesday, May 10, 2011

ಪ್ರೇಮದ ಎಲ್ಲೆ!ಇಳಿಸಂಜೆಯ ಹೊತ್ತು
ಮುತ್ತಿನಾ ಮತ್ತು
ಬೆಚ್ಚನೆಯ ಅಪ್ಪುಗೆ
ಬಿಸಿಯುಸಿರ ಮೆಚ್ಚುಗೆ


ಕಣ್ಣಮಿಂಚಿನ ಸೆಳೆತ
ನನ್ನ ಎದೆಯಾ ಬಡಿತ
ಸ್ವರ್ಗವಿರುವುದು ಇಲ್ಲೇ
ನಿನ್ನ ಬಿಗಿ ತೆಕ್ಕೆಯಲ್ಲೇ


ನಮ್ಮ ಈ ಪ್ರೀತಿಗೆ
ಎಲ್ಲೆ
ಎಲ್ಲೇ?
ನನ್ನ ಮುದ್ದು ನಲ್ಲೇ!

ಒಲವಿರಲಿ...

ನೋವಿರಲಿ ನಲಿವಿರಲಿ
ನಗುವಿರಲಿ ಅಳುವಿರಲಿ
ಹೂವಿರಲಿ ಮುಳ್ಳಿರಲಿ
ಬಾಡದಾ ಒಲವಿರಲಿ!!

ಹಗಲಿರಲಿ ಇರುಳಿರಲಿ
ಬೆಳೆಯಿರಲಿ ಕಳೆಯಿರಲಿ
ಬರವಿರಲಿ ನೆರೆಯಿರಲಿ
ಬತ್ತದಾ ಒಲವಿರಲಿ!!

ಸೋಲಿರಲಿ ಗೆಲುವಿರಲಿ
ಹುಟ್ಟಿರಲಿ ಸಾವಿರಲಿ
ಹಸಿರಿರಲಿ ಕೆಸರಿರಲಿ
ಗಟ್ಟಿಯಾದ ಒಲವಿರಲಿ

ಸವಿಯೊಲವು!
ಒಂದು ಮುಂಜಾವಿನಲಿ ಮಲ್ಲೆ ಮೊಗ್ಗೊಂದು
ಹನಿಹನಿ ಇಬ್ಬನಿಯಲಿ ತಾನು
ಹಿತವಾಗಿ ಮಿಂದು
ಬಿರಿಯಲನುವಾಗಿಹುದು
ಆ ರವಿಯ ಕಂಡು

ಮಲ್ಲೆಯೊಡಲಲಿ ತುಂಬಿಹುದು ಜೇನು
ಹೀರಬಂದಿಹುದೊಂದು
ಮರಿದುಂಬಿ ತಾನು
ಸಿಹಿಯುಂಟು ಸೊಗಸುಂಟು
ಸವಿಯುಂಟು ಎಂದು

ಎಳೆ ಮಲ್ಲೆ
ಬಿಳಿ ಮಲ್ಲೆಯಾದರೇನು?
ಮರಿದುಂಬಿ
ಕರಿದುಂಬಿಯಾದರೇನು?
ಆಗಿರಲು ಸಿಹಿಜೇನು ಸವಿಯೊಲವು!

Friday, April 22, 2011

ಕೃತಜ್ಞತೆ
ಗೆಳತಿ... ಕೃತಜ್ಞ ನಾ ನಿನಗೆ
ಬಾಳಿನೆಲ್ಲ ನೋವು ನುಡಿಯಲು
ಸಂತಸವ ಹಂಚಿಕೊಳಲು
ಉಳಿದಿರುವ ಆತ್ಮೀಯಳು ನೀನಲ್ಲವೆ?

ಬಾಳಕಹಿ ನುಡಿದಾಗ
ಸ್ನೇಹಸವಿ ತುಂಬುವಾ
ನಿರಾಶೆಯ ಬಾಳಿಗೆ
ಉತ್ಸಾಹವೀಯುವಾ
ಗೆಳೆತನ ನಿನ್ನ ಕಣ್ಣಲಿದೆ ಗೆಳತಿ II

ನಿನ್ನ ಸಾಂತ್ವನದ ನುಡಿ
ಲೋಕವನ್ನೇ ಗೆಲ್ಲುವ ಛಲ ತಂದಿದೆ
ಆಡಿದವರ ನಾಲಗೆ ಸೀಳುವ
ಬಲತಂದಿದೆ ಗೆಳತಿ... II

ನುಡಿಯಲಾಗದ ಭಾವಗಳನ್ನೂ
ನನ್ನ ಮನದಿಂದ ಹೊರತೆಗೆದು
ಹೆರೆಯನಿಲಿಸಿ, ನನ್ನ ಉಸಿರಾದ ನಿನಗೆ
ನನ್ನ ಕಡೆಯ ಉಸಿರಿನವರೆಗೂ ಕೃತಜ್ಞ!  II


ಆಕ್ರಂದನ

ಮನದ ಆಳದಿಂದ ಮೇಲಕ್ಕೆದ್ದ ನೋವುಗಳೆಲ್ಲ
ಮುಗಿಲೆತ್ತರಕ್ಕೆ ಜಿಗಿದು, ಬಾನಿನಾಳವ ಸೀಳಿ
ಅಸ್ತಿತ್ವವೇ ಇಲ್ಲದ ದೇವನಲಿ ನ್ಯಾಯಕ್ಕಾಗಿ
ಇಡುವ ಮೊರೆಯೇ ಈ ಆಕ್ರಂದನ II

ಅಪರಿಮಿತ ಮಾನಸಿಕ ಹಿಂಸೆ
ತಾಳದೀ ಜೀವ ವಿರಹದ ಚಿಂತೆ
ಹೇ ದೇವ... ಕೇಳದೇ ನನ್ನೊಡಲ ಆಕ್ರಂದನ
ನಿನ್ನಿಂದಲೂ ಅಸಾಧ್ಯವೆ ನಮ್ಮೀರ್ವರ ಮಿಲನ II

ನೀನಂತೆ ಒಬ್ಬ ನಿಷ್ಕಪಟಿ
ಅಲ್ಲಾ... ನೀ ಖಂಡಿತಾ ನಿಷ್ಕರುಣಿ
ಬೇಡದ ಸಂಬಂಧ ಬೆಸೆದುಬಯಸಿದಾ ಬಂಧ ಬಿರಿದು
ಹಾಲಿನಾ ಸ್ನೇಹಕ್ಕೆ ವಿಷ ಬೆರೆಸುವ ನಿನ್ನ

ಕ್ಷೀರಸಾಗರದಲಿ ಬರೀ ಹಾಲಾಹಲವೆ ತುಂಬಲಿ
ಅದರಲ್ಲೇ ನಿನ್ನ ನಿರ್ನಾಮ ಆಗಲಿ II

(ಆನಂದ್ - 1989)

Thursday, April 21, 2011

ತುಮುಲ


ಅಳುವೊಮ್ಮೆ ನಗುವೊಮ್ಮೆ
ಭಯದ ಅಲೆಯೊಮ್ಮೆ
ಸೋಲಿನಾ ಸೆಲೆಯೊಮ್ಮೆ
ಈ ಮನದಿ ಮೂಡಿದೆ II

ಕೊಂದವರ ಕೊಲ್ಲಲೇ?
ಹಿನ್ನೆಲೆಯ ತಿಳಿಯಲೇ?
ಚಿತ್ರಹಿಂಸೆ ನೀಡಲೇ?
ಎಂದೇ ತಿಳಿಯದಾಗಿದೆ

ಈ ಹತ್ಯೆ ನ್ಯಾಯಪಾಲನೆಗೋ?
ಅಥವಾ ಕೋಮುಗಲಭೆಗೋ?
ಎಂದೋ ಹಿಂದಿನ ದ್ವೇಶಕ್ಕೋ?
ಹೊಟ್ಟೇಕಿಚ್ಚಿನ ಕೋಪಕ್ಕೋ?

ಅಂತೂ ಈ ವಧೆ, ಕೆಡೆಸಿದೆ ಮನದ ನೆಮ್ಮದಿ
ಇದರೊಡನೆ ದೇಶದ
ಸುವರ್ಣಯುಗದ
ಆರಂಭವೋ? ಅವನತಿಯೋ? ಕಾಣೆ

ಇದರಿಂದ ಕೆಲವರಿಗೆ ಆನಂದ
ದೇಶದ ಸುಧೀರರಿಗೆಲ್ಲಾ ಅಪಮಾನದ ಬಂಧ
ಸಿಖ್ - ಭಾರತ ಸಂಬಂಧ
ಮುಗಿಯದಿರಲಿ ಆ ಅನುಬಂಧ

(ಆನಂದ್ - 31.10.1984 - ಇಂದಿರಾ ಗಾಂಧೀ ಕೊಲೆಯಾದ ಸುದ್ದಿ ತಿಳಿದ ಕ್ಷಣದಲ್ಲಿ @ 11.30 AM)

ಗೊಂದಲ


ಮನಕೆ ಭ್ರಾಂತಿ ತಟ್ಟಿತೋ
ಅಚ್ಚರಿಯ ಅಲೆಯುಕ್ಕಿತೋ
ಭಾರತದ ಬೆನ್ನೆಲುಬು ಮುರಿಯಿತೋ
ಇಂದಿರೆಯ ಕೊಲೆಯಾಗಿ ಹೋಯಿತೋ

ಗಡಿಯಲ್ಲಿ ಯುದ್ಧ ಶುರುವಾಯಿತೋ
ಎಲ್ಲಿ ನೋಡಿದರಲ್ಲಿ ಸೈನಿಕನೋ
ಶಾಂತಿ ಸಿಗದ ಬಂಜರು ಭಾರತವೋ
ಆಗುವುದೇ ಪರಜನರ ಪಾಲು
ಇಲ್ಲಾ.. ನಮ್ಮ ಉದಯದ ಕನಸು ಹಾಳೋ?

ಸರ್ವಾಧಿಕಾರಿಯ ಪಾಲು...
ಆದೀತೆ? ಈ ದೇಶ ಹಾಳು
ಅತಿಶೋಕದ ಕಥೆಯಿದುವೆ ಕೇಳು
ಮುಳುಗುತಿಹ ಭಾರತಕೆ
ರಕ್ಷಕರು ಯಾರು? ಮುಂದಾರು?

(ಆನಂದ್ - 31.10.1984 - ಇಂದಿರಾ ಗಾಂಧೀ ಕೊಲೆಯಾದ ಸುದ್ದಿ ತಿಳಿದ ಕ್ಷಣದಲ್ಲಿ @ 11.30 AM)

ಹಿರಿಯರು

ಇವರು ನಮ್ಮ ಹಿರಿಯರು
ಸಂಪ್ರದಾಯದ ಸರಹದ್ದಿನಲ್ಲಿ
ಸರಪಳಿಯಲ್ಲಿ ಬಂಧಿತರು II

ಕುಹಕವಾಡಿ, ಕಲ್ಪನೆಯ
ಇಲ್ಲದ ಸಂಬಂಧ ಇರಿಸಿ
ಮನ ಕೆಡಿಸುವ ಸೂತ್ರಧಾರಿಗಳು II

ಸ್ನೇಹಸುಧೆಯ ಸಿಹಿ ತಿಳಿಯದ
ಮೂಢ ಸಮಾಜಕ್ಕೆ ಬೆದರಿ
ನಡೆವಂತೆ ಒತ್ತಾಯಿಸುವ ಬಲಾತ್ಕಾರಿಗಳು II

ತಾವೂ ಹೊರಬರದೆ, ಬರುವವರನ್ನೂ
ಬಿಡದೆ, ಸಂಪ್ರದಾಯದ ಸುಳಿಯಲ್ಲಿ ಸಿಲುಕಿ
ಜೀವಹೀರುತ್ತಿರುವ ರಕ್ಕಸರು II

(ಆನಂದ್ - 1986)

ಪಂಪ್ ಸ್ಟವ್

ಸಿಡಿಯುವೆ ನಾನು
ಅತ್ತೆಯ ಮನೆಯಲ್ಲಿ
ತವರಿನಲ್ಲಲ್ಲಾ... II

ದಹಿಸುವೆ ನಾನು
ಅತ್ತೆಗೆ ಬೇಡದ ಸೊಸೆಯನ್ನು
ಮನೆ ಮಗಳನಲ್ಲಾ...II

ಸಿಡಿಯುವೆ ನಾನು
ಮನೆಯಲ್ಲಿ ಎಲ್ಲರೂ ಇದ್ದು
ಯಾರೂ ಇಲ್ಲದ ಸಮಯದಲ್ಲಿ...II

ಸುಟ್ಟುಬಿಡುವೆ ನಾನು
ವರದಕ್ಷಿಣೆ ತಾರದ
ಸೊಸೆಯನ್ನು ಮಾತ್ರಾ...II

(ಆನಂದ್ - 1986)

ಸ್ಥಾನಮಾನ


ಗೆಳತಿ,
ನಿನಗಾಗಿ ಸೃಷ್ಟಿಸಿ ಕೊಟ್ಟಿರುವೆ ಒಂದು ಸ್ಥಾನ
ಅದುವೇ ನನ್ನ ಹೃದ ಸಿಂಹಾಸನ
ನಿನ್ನ ನೆನಪಿನ ಇಂಧನ
ನಡೆಸುತಿದೆ ನನ್ನಯಾ ಜೀವನ

ಗೆಳತಿ,
ನನ್ನ ಕಣ್ಣು ನಾನೇ ಆದರೂ
ಅದರ ನೋಟ ನೀನು
ನನ್ನ ದೇಹ ನೀನೇ ಆದರೂ
ಅದರ ಉಸಿರು ನೀನು

ನೀನಿಲ್ಲದಿರೆ ಈ ಜೀವನ
ಕೊನೆಯಾಗಲಿ ಅಗಲಿಕೆಯ ಮರುಕ್ಷಣ
ಆಕ್ರಮಿಸಿರುವೆ ನೀ ನನ್ನ ಕಣಕಣ
ನಿನ್ನಾಸರೆಯೇ ನನ್ನ ಜೀವ ಸ್ಪಂದನ

ನಿನಗಾಗಿ ಕೊಟ್ಟಿರುವೆ ಸ್ಥಾನ
ಶಾಶ್ವತ, ಇರುವವರೆಗೂ ನನ್ನ ಪ್ರಾಣ

(ಆನಂದ್ - 1989) 

ಕಾಣಿಕೆಗೆಳತಿ,

ನೀಡುವೆ ನಿನಗೆ ಕಾಣಿಕೆ
ಮೀರಿದೆ ಅದು ಎಣಿಕೆ II

ಮಿಂಚುವಾ ನಿನ್ನ ಕಂಗಳಿಗೆ
ಹೊಳಪಿನಾ ಕಾಣಿಕೆ I
ಸಂಚಿನಾ ಚೆಂದುಟಿಗಳಿಗೆ
ಸವಿಮುತ್ತಿನಾ ಕಾಣಿಕೆ II

ಬಳುಕುವಾ ನಿನ್ನ ದೇಹಕೆ
ಆಸರೆ ಎಂಬ ಕಾಣಿಕೆ I
ಹೂವಿನಾ ನಿನ್ನ ಹೃದಯಕೆ
ನಾನೆಂಬ ಕಿರುಕಾಣಿಕೆ II

ನಿನ್ನ ಕನಸಿನ ಲೋಕಕೆ
ನನ್ನಯಾ ನೆನಪೆ ಕಾಣಿಕೆ I
ಮುದಗೊಳಿಸಲು, ನಿನ್ನ ಮನಸಿಗೆ
ಈ ಕವನವೇ ಪ್ರಿಯ ಕಾಣಿಕೆ II

(ಆನಂದ್ - 1990)

Tuesday, April 19, 2011

ಬಾ ಕನಸಿನ ಲೋಕಕೆ...
ಬಾ ಗೆಳತಿ ನನ್ನ ಕನಸಿನ ಲೋಕಕೆ
ಬಲು ದೂರದಲಿರುವ ಸ್ನೇಹ ಜಗಕೆ


ಅಲ್ಲುಂಟು ನನ್ನ ಪ್ರೀತಿಯ ಸ್ವಪ್ನಸೌಧ
ಕಟ್ಟೋಣ ಅದರಲ್ಲಿ ಅಮರ ಪ್ರೇಮಸೌಧ
ವಿಹರಿಸೋಣ ಅದರಲ್ಲಿ ಸ್ವೇಚ್ಛೆಯಾಗಿ
ಮರೆತೆಲ್ಲ ನೋವ - ಮಧುರವಾಗಿ

ಅಲ್ಲಿಲ್ಲ ಈ ದೇಹ ಮೋಹದಾಟ
ಅಲ್ಲಿಲ್ಲ ಈ ಜನರ ಮೋಸದಾಟ
ಮಡಿಲಲ್ಲಿ ತಲೆಯಿಟ್ಟು ಆಡೋಣ ಆಟ
ಮರೆಯೋಣ ಎಲ್ಲ ನೋವು ತಾಕಲಾಟ

ನಾವು ತಿರುಗಿ ಇಲ್ಲಿಗೆ ಬರುವುದೇ ಬೇಡ
ಈ ಜನರ ಸಹವಾಸ ಬೇಡವೇ ಬೇಡ
ಚಿನ್ನಾ... ಕಾಮನಾಬಿಲ್ಲ ತಬ್ಬಿದಾ ಮೋಡ
ಕೈಬೀಸಿ ಎಮ್ಮ ಕರೆದಿಹುದು ನೋಡ

ಬಾ ಗೆಳತಿ ನಿನಗೀವೆ ಆಹ್ವಾನ
ನಿರೀಕ್ಷಿಸುತ್ತಾ ಆನಂದಲೋಕಕೆ ನಿನ್ನಾಗಮನ
ವಾಸ್ತವಕೆ ಬಳುದೂರದಲ್ಲಿದೆ ಆ ಭವನ
ಅಲ್ಲಿಂದ ಸಲ್ಲಿಸುವ ಈ ಜಗಕೆ ಕೊನೆ ನಮನ

(ಆನಂದ್ - 1988)

ನನ್ನಾಸೆ
ಗೆಳತಿ,

ನನಗಿಹುದೊಂದಾಸೆ
ನನ್ನಾಸೆಗಳ ನಿನ್ನಲ್ಲಿ ನುಡಿವಾಸೆ

ನಿನ್ನ ಮಡಿಲಲ್ಲಿ ತಲೆಯಿಟ್ಟು
ಕನಸ ಹೆಣೆಯುವಾ ಆಸೆ
ಕಂಡ ಕನಸುಗಳ ನನಸಾಗಿ
ಕಾಣಲು ಬಲು ಆಸೆ!

ನಿನ್ನ ಕಣ್ಣ ಮಿಂಚಾಗಿರಲು ಆಸೆ
ನಿನ್ನ ತುಟಿಯ ನಗುವಾಗಿರಲು ಆಸೆ
ನೀ ಕಾಣುವ ಕನಸಾಗಿರುವ ಆಸೆ

ಗೆಳತಿ,

ನಿನ್ನಾಸೆಗಳ ಆಸರೆಯಾಗಲು ಬಲು ಆಸೆ
ನಿನ್ನ ನಾಚಕೆಯ ನೋಟವಾಗಲಾಸೆ
ನಿನ್ನ ತೂಗುವ ಮುಂಗುರುಳಾಗುವಾಸೆ
ನಿನ್ನ ಕನಸೆನೆಲ್ಲಾ ಆಕ್ರಮಿಸುವಾಸೆ
ನಿನ್ನ ಮನದಲ್ಲಿ ಸ್ಥಿರವಾಗಿರಲೆನಗಾಸೆ!

ನಿನ್ನ ಬದುಕು ಸುಖವಾಗಿರಲೆಂಬಾಸೆ
ಅದಕಾಗಿ ನನ್ನನರ್ಪಿಸುವ ಮಹದಾಸೆ!!

(ಆನಂದ್ - 1988)

ಮಾನವ

ಮಾನವ...

ಹಕ್ಕಿಯಂತೆ
ಹಾರಲು ಕಲಿತ...

ಮೀನಿನಂತೆ
ಈಜಲು ಕಲಿತ...

ಹಂಸದಂತೆ
ತೇಲಲು ಕಲಿತ...

ಮಾನವನಾಗಿ
ಬಾಳಲು ಮರೆತ!!

( ಪಾಪು ಡೈರಿಯಿಂದ - ಆನಂದ್ - 1994)

ಕನ್ನಡಿ

ಚೂರಾದ ಹೃದಯವದು
ಕನ್ನಡಿಯ ಒಡೆದ
ತುಣುಕುಗಳಂತೆ

ಮರಳಿ ಜೋಡಿಸಿಡೆ
ಬಿಂಬ ವಕ್ರವಾಗಿ
ತೋರುವುದೆಂಬ
ನಿನ್ನ ತತ್ವ
ನನಗೆ ಸಮ್ಮತ

ಅದಕ್ಕೇ...
ಆ ನೂರು ಚೂರುಗಳನ್ನು,
ನೂರು ಕನ್ನಡಿಯಾಗಿ ತಿಳಿದು
ನಿನ್ನ ನೂರು ರೂಪ
ನನ್ನ ಕಂಗಳಲ್ಲಿ
ತುಂಬಿಕೊಳ್ಳುವೆನೆಂದ...

(ಆನಂದ್ - 1991)

ರೈತಣ್ಣಾ...


ಹೊತ್ತು ಮೂಡುವ ಮುನ್ನ

ಎತ್ತು ಹೂಡುವನಣ್ಣಾ

ಉತ್ತು ಭೂಮಿಯ ಮಣ್ಣ

ಬಿತ್ತುತಾ ಬೆಳೆವನು ಚಿನ್ನ !!

(ಆನಂದ್ - 1992)

Monday, April 18, 2011

ಭೂಮಿ ಬಾನು

ಗೆಳತಿ, ನೀನು ನಾನು
ಆಗಿಹೆವು ಭೂಮಿ ಬಾನು
ತಿಳಿದಿಹೆವು ಸತ್ಯವನ್ನು
ಚೆಲ್ಲಿ ಭ್ರಮೆಯನ್ನು

ಜಗಕೆಲ್ಲ ನಮ್ಮ ಮಿಲನ
ಸಂಜೆ ಸೂರ್ಯನ ರಂಗಲಿ
ಆ ನೀಲಿ ಕಡಲಿನ
ಮುಗಿಯದಾಚೆಯ ಅಂಚಲಿ

ನಾನೂ ನೀನೂ ತಿಳಿದಿಹೆವು ಸತ್ಯ
ನಂಬಿ ನಲಿದಿಹರು, ಜನರೆಲ್ಲ ಮಿಥ್ಯ
ಮಿಲನ ಕನಸು, ಕಲ್ಪನೆ
ಇರುವಂತೆ ಮರಳ್ಗಾಡ ಮರೀಚಿಕೆ

(ಆನಂದ್ - 1992)

ಕಲಾವಿದೆ

ನನ್ನಾಕೆ,

ಕಣ್ಣರೆಪ್ಪೆಯ

ಕುಂಚದಿಂದ

ನನ್ನ ಹೃದಯದ

ಕ್ಯಾನ್‍ವಾಸಿನಲ್ಲಿ

ತನ್ನದೇ

ಪೋರ್ಟ್‍ರೈಟ್

ರಚಿಸಿದಾಕೆ!

(ಆನಂದ್ - 1993)

ಬತ್ತದ ಪ್ರೀತಿ


ಬತ್ತಲಾರದು ಗೆಳತಿ
ನಿನ್ನ ಮೇಲಿನ ಪ್ರೀತಿ
ಬತ್ತಲಾದರು ಗೆಳತಿ
ನಿನ್ನ ನಿಜ ರೀತಿ

ಹೊತ್ತಿ ಉರಿವುದು ಜ್ಯೋತಿ
ಸುತ್ತ ಚೆಲ್ಲುತ ಕಾಂತಿ
ಮತ್ತೆ ಆರುವ ಭೀತಿ
ಅದಕ್ಕಿಲ್ಲ ಗೆಳತಿ

ಮಾಡಿದೆ ಹೀಗೇಕೆ ವಂಚನೆ?
ಮಾಡಿಕೋ ಅಂತರಂಗ ಶೋಧನೆ
ನೀನರಿಯೆ ನನ್ನೊಡಲ ವೇದೆನೆ
ಪ್ರೀತಿಗಿಲ್ಲ ನಿನ್ನಲ್ಲಿ ಸಂವೇದನೆ

ನನ್ನ ಪ್ರೀತಿಯ ಹಣತೆ
ಏನಿತ್ತೆ? ಅದರಲ್ಲಿ ಕೊರತೆ
ಕೊಟ್ಟ ಮಾತೆಲ್ಲಾ ಏಕೆ ಮರೆತೆ?
ನನಗೆ ಸದಾ ನಿನ್ನದೇ ಚಿಂತೆ

ಕೆಟ್ಟ ಮಗನೆಡೆಗೆ
ಅವನಮ್ಮನ ಮಮತೆ
ಅವಳ ಹಿರಿಮೆಯಲ್ಲ...
ದೌರ್ಬಲ್ಯವಂತೆ

ಎನಗೆ ನೀನೆಸಗಿದರು
ದ್ರೋಹಗಳ ಕಂತೆ
ದ್ವೇಷಿಸಲಾರೆ ನಾ
ನಿನ್ನನೆಂದಿಗೂ ಕಾಂತೆ!

(ಆನಂದ್ - 1992)

ನನ್ನ ಪಾಪು...ಗೆ!ಪಾಪು
ನಿನ್ನ ನಗೆ
ಮುಗ್ಧ... ಸುಂದರ

ಮಲ್ಲೆ ಬಿರಿದಂತೆ
ಬೆಳಕು ಹರಿದಂತೆ
ಮೋಡ ಸರಿದಂತೆ
ಮುತ್ತು ಸುರಿದಂತೆ

ಪಾಪು
ನಿನ್ನ ನಗೆ
ಸ್ನಿಗ್ಧ ಮಂದಾರ

ಕಡಲ ತೆರೆಯಂತೆ
ಹಸಿರ ಧರೆಯಂತೆ
ಪ್ರೇಮ ತೊರೆಯಂತೆ
ಹಾಲ ನೊರೆಯಂತೆ

(ಆನಂದ್ - 1997)

ಮಿಲನ


ನೀನು ಮುಗಿಲು
ನಾನು ಕಡಲು
ಎಲ್ಲಿ ಸಮ್ಮಿಲನಾ !

ಬೆಂಕಿ ಭುಗಿಲು
ಬರಡು ಬಯಲು
ಎಲ್ಲಿಗೋ ಪಯಣ !!

ನೀನು ಹಗಲು
ನಾನು ಇರುಳು
ಎಲ್ಲಿ ಆಲಿಂಗನಾ
ಪ್ರೇಮದಾಲಿಂಗನಾ !

ನೀನು ನಗಲು
ನಾನು ಅಳಲು
ಎಲ್ಲಿದೇ ಬಂಧನಾ
ಭಾವದಾ ಬಂಧನಾ !!

ನೀನು ನವಿಲು
ನಾನು ಬಿಸಿಲು
ಎಲ್ಲಿದೆ ನರ್ತನಾ !

ಸಿಡಿಯೆ ಸಿಡಿಲು
ಒಡೆಯೆ ಒಡಲು
ಛಿದ್ರ ಈ ಜೀವನ !!

(ಆನಂದ್ - 1992)

ಪ್ರೇಮದ ರಿಮೋಟ್!


ಗೆಳತಿ,

ನಿನ್ನ ಪ್ರೇಮದ

ರಿಮೋಟ್ ಕಂಟ್ರೋಲ್‍ನಿಂದ

ಸಾಗುತ್ತಿದ್ದ

ನನ್ನ ಜೀವನ,

ಅದು ಕೆಟ್ಟ ನಂತರ

ಎಣ್ಣೆ ಹೀರುತ್ತಾ

ಹೊಗೆ ಕಾರುತ್ತಾ

ಸಾಗುತ್ತಿದೆ!

(ಆನಂದ್ - 1992)

ಪ್ರೀತಿಯ ಆಳ!

ಪ್ರೇಯಸಿ,

ನಿನಗೆ ನನ್ನ ಗಾಢಪ್ರೇಮದ

ಆಳ ತೋರಿಸಲು ಹೋಗಿ

ತಳ ತಲುಪಿದ್ದೆ!

ಮೇಲಿನಿಂದ ಮಣ್ಣು

ಸುರಿದು, ಮುಚ್ಚಿ ನನ್ನೇಕೆ

ನೀ ಸಮಾಧಿಗೈದೆ?


ನನ್ನ ಮುಗ್ಧತೆ ನಿನಗೆ

ದೌರ್ಬಲ್ಯದಂತೆ ಕಂಡಿತೆ?

ಭಲೇ! ನಂಬಿದರೆ

ಕೊರಳ ಕೊಯ್ದ

ನಿನ್ನ ಪ್ರವೀಣತೆ


ತಿಳಿ ಗೆಳತಿ

ಮೋಸಗೊಳ್ಳುವುದು

ಅವಮಾನವಲ್ಲ...

ಮೋಸ ಮಾಡುವುದು

ಅಪಮಾನಕರ!!

(ಆನಂದ್ - 1992)

ಕೆಂಗುಲಾಬಿ!

ಬಯಸಿ ಬಯಸಿ ಕೊಂಡೆನೊಂದು
ಗುಲಾಬಿಯ ನಲ್ಲೆಗಾಗಿ!

ನುಡಿದೆ...
ಎಂಥಾ ಚೆಂದ ನಿನ್ನ ಕೆಂಪು
ಬಿರಿದ ನಲ್ಲೆಯ ತುಟಿಯ ಹಾಗೆ,
ಸಂಜೆ ಸೂರ್ಯನ ಹಾಗೆ..
ನನ್ನವಳ ನಾಚಿದ ಕೆನ್ನೆಯ ಹಾಗೆ..
ತಂದಿಹುದು ಎನ್ನೆದೆಗೆ ತಂಪು
ನಿನ್ನಯಾ ಮೋಹಕ ಕಂಪು! ಕೆಂಪು!

ನುಡಿಯತಾ ಗುಲಾಬಿ...
ಗೆಳೆಯಾ...
ಶಾಲಿಮಾರಿನಲ್ಲೀಗ ಅರಳುವುದು
ಕೆಂಗುಲಾಬಿ ಮಾತ್ರ...!
ಆ ಕೆಂಪು...
ಹೊತ್ತಿ ಉರಿವ ಮನೆಗಳಾ!
ಅತ್ತ ಕಂದಮ್ಮಗಳಾ!
ಸತ್ತ ಮುಗ್ಧರಾ ನೆತ್ತರಿನ ಕೆಂಪು

(ಆನಂದ್ - 1994)

Saturday, January 15, 2011

ಮನೆಗೆ ಮಾರಿಯಾಗದಿರಲಿ ಕನ್ನಡಿಗ!!


ಅಂದೊಮ್ಮೆ...
ಕಾರ್ಗಿಲ್‌ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...

ಹಿಂದೊಮ್ಮೆ ...
ಲಾಥೂರ್‌, ಕಿಲಾರಿಯಲ್ಲಿ,
ಕಛ್‌, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...

ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...

ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...

ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!

ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...

ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ

ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!

ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!


(ಆನಂದ್ - 2005)

Tuesday, January 11, 2011

ನನ್ನ ನಲ್ಲೆ..

ನನ್ನವಳು...
ಮುಗುಳ್ನಗೆಯ ಮಳೆಗೆರೆದು
ಮೌನದಾ ಸೆಲೆಯಲ್ಲೇ
ಮನ ಕದ್ದವಳು
ಹೃದಯ ಗೆದ್ದವಳು... II

ಕಣ್ಣೆದುರು ನನಸಾದ
ಪ್ರೇಮ ಪುತ್ಥಳಿಯಿವಳು...
ಕಣ್ಮುಚ್ಚೆ ಕನಸಾಗಿ
ಕಾಡುವವಳು...
ಲಾಲಿ ಹಾಡುವವಳು...II

ನಯನದಲೆ ಮನಮುಟ್ಟಿ
ಭಾವದಲೆಗಳ ತಟ್ಟಿ
ಬಾಳ ಬನದಲ್ಲಿ ನನ್ನ
ಜತೆಯಾದಳು...
ಮನಕೆ ಹಿತವಾದಳು...II

(ಆನಂದ್ - 1995)

ಏಳು ಹೆಜ್ಜೆ


ಗೆಳತಿ,
ನನ್ನೊಡನೆ ನೀನಿಡುವ ಏಳುಹೆಜ್ಜೆ
ಬಾಳ ಏಳು ಬೀಳುಗಳ ಆಸರೆ...
ಪ್ರೀತಿ ತುಂಬಿದ, ನೀತಿ ತುಂಬಿದ
ಪವಿತ್ರ ಬೆಸುಗೆಯೆಡೆಗಿನ ಏಳು ಹೆಜ್ಜೆ...II

ಬೇವುಬೆಲ್ಲಗಳ ನೋವುನಲಿವುಗಳ
ಸಮನಾಗಿ ಸವಿಯಾಗಿ ಮೆಲ್ಲೋಣ ಬಾ
ಪ್ರೇಮದಪ್ಪುಗೆಯಲ್ಲಿ ಬೆಚ್ಚಗಿನ ಮುತ್ತಲ್ಲಿ
ಕರಗೋಣ, ಕನಸುಗಳ ಹೆಣೆಯೋಣ ಬಾ...II

ಹೊಸತು ನಾಳೆಯು ನಮಗೆ..
ಬರಲಿ ಬೆಂಕಿ ಬಿರುಗಾಳಿಯ ಚಂಡಮಾರುತ
ಸಾಗೋಣ ಎದುರಾಗಿ... ಗೆಲುವಿನೆಡೆಗೆ
ಸೋತರೂ ಜತೆಯಾಗಿ ಸಾವಿನೆಡೆಗೆ... II

(ಆನಂದ್ - 1995)

ಒಲವಿನಾ ಆಸರೆ...

ನಲ್ಲೇ
ಜೀವನದ ನಂದನದಿ
ನೀ ಬಳುಕೋ ಬಳ್ಳಿಯಾದರೆ
ನಾನಾಗಿ ಮರ
ನೀಡುವೆ ಆಸರೆ!

ಬಾಳ ಚೆಲುವಿನ ಮೊಗದಿ
ನೀ ಕಣ್ಣಾಗಿರಲು ಮುಗುದೆ
ನಾನಾಗಿ ಕಾಯ್ವೆ
ಕಣ್ಣರೆಪ್ಪೆ!

ಮಿಡಿಯುಸಿರು ನೀನಾಗಿ
ತಂಗಾಳಿ ನಾನಾಗಿ
ನಿನ್ನ ಬಾಳಿನ ಉಸಿರು
ನಾನಾಗುವೆ!

ಕಣ್ಣ ನೋಟವ ಬೆರೆಸಿ
ಮನದ ನೋವನು ಮರೆಸಿ
ಪ್ರೇಮ ಸಾಮ್ರಾಜ್ಯದಿ ನಿನ್ನ
ನಾ ಮೆರೆಸುವೆ!

(ಆನಂದ್ - 1995)

ನಿನ್ನ ನಗೆಯ ಬೆಲೆ...

ನಲ್ಲೇ,
ನಿನ್ನ ಮುಗುಳುನಗೆಯ ಬೆಲೆ
ಹತ್ತು ಪೈಸೆಯಾದರೂ
ನಾ ಕೊಳ್ಳಲಾರೆ...

ಆದರೆ,
ಕೋಟಿ ರಕ್ತದ
ಹನಿಗಳಾದರೂ... ಸರಿಯೇ,

ನನ್ನ ಹೃದಯವನು ಬಸಿದು
ನರನಾಡಿಗಳ ಹಿಂಡಿ
ಧಾರೆಯೆರೆದು...
ಕೊಂಡುಕೊಳ್ಳುವೆ

(ಆನಂದ್ - 1988)

Monday, January 3, 2011

ನನ್ನೊಳಗಿನಾ ಹಾಡು
ನನ್ನೊಲವಿನಾ...
ನನ್ನೊಳಗಿನಾ...
ಕೋಗಿಲೆಗೆ ಈಗಲೇ
ಹಾಡುವಾಸೆ    II

ಈ ಹಾಡಿನಾ ಒಳಗೇ
ಶೃತಿಯಿಲ್ಲ... ಗತಿಯಿಲ್ಲ
ಸಿರಿಯ ಸೊಬಗಿಲ್ಲಾ...
ಮೆರುಗಿನಾ ಪದವಿಲ್ಲಾ...    II

ರಾಗಗಳ ಇಂಪಿಲ್ಲಾ...
ಭಾವಗಳ ಸೊಂಪಿಲ್ಲಾ...
ತಂಗಾಳಿ ತಂಪಿಲ್ಲಾ
ಈ ಹಾಡಲೀ...    II


ನನ್ನೊಲವಿನಾ...
ನನ್ನೊಳಗಿನಾ...
ಕೋಗಿಲೆಗೆ ಈಗಲೇ 
ಹಾಡುವಾಸೆ    II

(ಆನಂದ್ - 1994)

Saturday, January 1, 2011

ಓ ಪ್ರಿಯೆ... ಪ್ರಾಣಪ್ರಿಯೆ...


ನಿನ್ನಯ ಪ್ರೇಮದಿ ತೇಲಿದೆನಂದು
ಚಂದದ ಓ ಗೆಳತೀ
ಮತ್ತದೇ ನೆನಪಲಿ ಬಾಳಿಹೆನಿಂದು
ಕೇಳೇ ಓ ಗೆಳತಿ         II ಓ ಪ್ರಿಯೇ... ಪ್ರಾಣಪ್ರಿಯೆ II

ಕಾರಣವಿಲ್ಲದೇ
ದೂಡಿದೆ ದೂರಕೇ
ನನ್ನನು... ಏತಕೇ ಅಂದು
ನನ್ನೆದೆ ಕೋಗಿಲೆ
ನರಳಿತು ಅಂದು
ವಿರಹದ ನೋವಲೀ ಬೆಂದು     II ಓ ಪ್ರಿಯೇ... ಪ್ರಾಣಪ್ರಿಯೆ II

ಹೃದಯದ ಬಾಗಿಲು
ತೆರೆದಿದೆ ನಿನಗೇ
ಬಾರೆಯಾ ಮರಳಿ ಬಳಿಗೆ
ಬಾಳಿನ ಕತ್ತಲಾ
ನೀಗುವ ಹಣತೆ
ಆಗುವೆಯಾ ನೀ ಗೆಳತಿ         II ಓ ಪ್ರಿಯೇ... ಪ್ರಾಣಪ್ರಿಯೆ II

(ಆನಂದ್ - 1994)