Sunday, December 10, 2023

ರಾಮನವಮಿ ಎಂದರೆ...


ರಾಮನವಮಿ ಎಂದರೆ

ನನ್ನ ಅಂತರಂಗದಲ್ಲಿ ಅಚ್ಚಾಗಿರುವ

ಸದಾ ನಗುಮೊಗದ ಶಾಂತಮೂರ್ತಿ,

ಪ್ರೇಮಮೂರ್ತಿ, ಕರುಣಾಮಯಿ

 

ಸೀತಾ ಲಕ್ಷ್ಮಣ ಹನುಮನ ಸಹಿತ ಶ್ರೀ ರಾಮಚಂದ್ರ.

ರಾಮನವಮಿ ಎಂದರೆ..

ತೀರಾ ಚಿಕ್ಕಂದಿನಲ್ಲಿ ಹಾಸನದಲ್ಲಿ

ಸೀತಾ ರಾಮಾಂಜನೇಯ ಗುಡಿಗೆ ಹೊತ್ತೊಯ್ಯುತ್ತಿದ್ದ ಅಕ್ಕಂದಿರು,

ಅಲ್ಲಿ ಪೂಜೆ ಮಾಡುವ ಜೊಯ್ಸರ "ಬಾರೋ ಹನುಮಂತರಾಯ"

ಎನ್ನುವ ಅಕ್ಕರೆಯ ಮಾತು,

ಕೋಸಂಬರಿ, ಪಾನಕ..

 

ರಾಮನವಮಿ ಎಂದರೆ..

ಮೈಸೂರು ಶಿವರಾಂ ಪೇಟೆಯ ಸಂಗೀತ ಕಾರ್ಯಕ್ರಮ,

ಮೈಕ್ ಸಿಸ್ಟಮ್ ಜೋಡಿಸುತ್ತಿದ್ದ ಸ್ವಯಂಸೇವಕ

ರತ್ನಾಕರನ ಜೊತೆ ಓಡಾಟ,

ರಾಮಮಂದಿರದ ಎಲ್ಲರೊಡನೆ ಪರಿಚಯದ ಕಾರಣ

ಅಲಂಕಾರ ಮಾಡುವ ಕೆಲಸ,

ಪಾನಕ ಕೋಸಂಬರಿ ಹಂಚುವ ಕೆಲಸ...

ಯಾವ ಪಾನಕ ಎಂದು ಕಾಯುತ್ತಾ

ಕರಬೂಜ ಹಣ್ಣಿನದ್ದು ಅಲ್ಲಾ ಎಂದಾಗ ಬಿಟ್ಟ ಹರ್ಷದ ನಿಟ್ಟುಸಿರು...

 

ರಾಮನವಮಿ ಎಂದರೆ..

ಜಗತ್ತಿನ ಎಲ್ಲಾ ಸದ್ಗುಣ ಗಳೂ ಇರುವ

ಮಾನವ ರೂಪಿ ಶ್ರೀರಾಮ ಎಂದು ಹುಟ್ಟಿದಾಗಿನಿಂದ

ಪೂಜಿಸಿದ, ಪ್ರೀತಿಸಿದ.. ಮರ್ಯಾದಾ ಪುರುಷೋತ್ತಮ

ಶ್ರೀರಾಮಚಂದ್ರನ ಹುಟ್ಟುಹಬ್ಬ..

 

ರಾಮನವಮಿ ಎಂದರೆ..

ಮನೆಯಲ್ಲಿ ಮಾಡುವ ದೇವರ ಪೂಜೆ,

ಅದರಲ್ಲಿ..ಅಮ್ಮ ಸಿದ್ಧ ಮಾಡಿದ

ಪಾನಕ ಕೊಸಂಬರಿಗಳನ್ನು ನೈವೇದ್ಯ ಮಾಡಿ,

ಮಂಗಳಾರತಿ ಎತ್ತಿ..

ಭಕ್ತಿಯಿಂದ ಮಾಡುವ ಉದ್ದಂಡ ನಮಸ್ಕಾರ!

 

ರಾಮನವಮಿ ಎಂದರೆ..

ಅಣ್ಣ ಆಗಾಗ ಹೇಳುತ್ತಿದ್ದ

ಜೈ ಸಿಯಾರಾಮ್ ಎಂಬ

ಭಕ್ತಿಯ ಮಂತ್ರದ ಸವಿನೆನಪು!

 


ಧರ್ಮ ಅಧರ್ಮ


ಅಧರ್ಮದಿಂದ 

ಅಭಿಮನ್ಯುವ ಕೊಲೆಗೈದ

ಕರ್ಣ ಸಾಯುವುದು

ನನಗೂ ಸಂಭ್ರಮ..

ಆದರೆ...

ಆಣೆಯಲ್ಲಿ ಕಟ್ಟಿ

ಕವಚಗಳ ಕಳಚಿ

ತೇರಗಾಲಿ ಹೂತಾಗ 

ಬಾಣ ಹೂಡಿ

ಕೊಂದದ್ದಕ್ಕೆ ಸಂಕಟ...


ಅಧರ್ಮದಿಂದ

ಅರಗಿನರಮನೆ ಸುಟ್ಟ

ದುರ್ಯೋಧನನ ಸಾವು

ನನಗೂ ಸಂಭ್ರಮ..

ಆದರೆ..

ನಿಯಮ ತೊರೆದು

ತೊಡೆಯ ಮುರಿದು

ಕೊಂದಿದ್ದಕ್ಕೆ ಸಂಕಟ... 


ಅಧರ್ಮದಿಂದ

ಸುಗ್ರೀವನ ಓಡಿಸಿ

ರುಮೆಯ ಸೆರೆ ಹಾಕಿದ

ವಾಲಿಯ ಸಾವು

ನನಗೂ ಸಂಭ್ರಮ..

ಆದರೆ...

ಮರೆಯಲಡಗಿ

ಬಾಣ ಬಿಟ್ಟು

ಕೊಂದಿದ್ದಕ್ಕೇ ಸಂಕಟ..


ಅಧರ್ಮದಿಂದ

ಮಂದಿರ ಮುರಿದೆಡೆಯಲ್ಲಿ

ರಾಮಮಂದಿರ 

ನನಗೂ ಸಂಭ್ರಮ

ಆದರೆ..

ಕಾನೂನು ಮುರಿದು

ಬಾಬರಿ ಮಸೀದಿ

ಕೆಡವಿದ್ದು ಸಂಕಟ.. 


ಧರ್ಮ ಸ್ಥಾಪನೆಗೆ (?)

ಅಧರ್ಮದ ಮಾರ್ಗ 

ಸಂಭ್ರಮ ಮೀರಿದ ಸಂಕಟ..

ಗುರಿ ಮುಖ್ಯ, ಮುಟ್ಟುವ ಮಾರ್ಗವೂ ಮುಖ್ಯ ಎನ್ನುವವರಿಗೆ ಇಂದು

ಸಂಭ್ರಮಕ್ಕೆ ಮೀರಿದ ಸಂಕಟ..

ವಾಸ್ತವ

ಭಾವನೆಗಿಂತ

ಸಂಭಾವನೆಗೆ ಬೆಲೆ ಹೆಚ್ಚು..


ಒಲುಮೆಗಿಂತ 

ದುಡಿಮೆಗೆ ಬೆಲೆ ಹೆಚ್ಚು..


ಸಂವೇದನೆಗಿಂತಾ 

ಸಂಪಾದನೆಗೆ ಬೆಲೆ ಹೆಚ್ಚು!


ಬಾಂಧವ್ಯಕ್ಕಿಂತಾ 

ದ್ರವ್ಯಕ್ಕೆ ಬೆಲೆ ಹೆಚ್ಚು 


ಇದು ಬದುಕಿನಲ್ಲಿ 

ಸಂಬಂಧಗಳ ನಿಜಗುಟ್ಟು!